ಲಾಕ್ ಡೌನ್ ಮಾಡುವಂತಹ ಪರಿಸ್ಥಿತಿ ನಿರ್ಮಿಸಲು ಕಾಂಗ್ರೆಸ್ ಪ್ರಯತ್ನ : ಎಸ್.ಟಿ.ಸೋಮಶೇಖರ್
ಬೆಂಗಳೂರು : ಪಾದಯಾತ್ರೆ ಮೂಲಕ ಬೆಂಗಳೂರಿಗೆ ಕೊರೊನಾ ಹಬ್ಬಿಸಿ ಲಾಕ್ ಡೌನ್ ಮಾಡುವಂತಹ ಪರಿಸ್ಥಿತಿ ನಿರ್ಮಾಣ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಸ್.ಟಿ.ಸೋಮಶೇಖರ್, ಕಾಂಗ್ರೆಸ್ ನವರು ಮೇಕೆದಾಟು ಯೋಜನೆ ಜಾರಿಗಿಂತ ಕೊರೊನಾ ಹಬ್ಬಿಸಿ ಕರ್ನಾಟಕವನ್ನು ಕೋವಿಡ್ ಹಬ್ ಮಾಡುವ ಉದ್ದೇಶ ಹೊಂದಿದ್ದಾರೆ.
ಜನರ ಜೀವ ರಕ್ಷಣೆ ಹೊಣೆ ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಚುನಾಯಿತ ಜನಪ್ರತಿನಿಧಿಗಳೆಲ್ಲರೂ ನಾಗರಿಕರ ಹಿತ ಕಾಯಬೇಕು.
ಆದರೆ, ಕೋವಿಡ್ ನಂತಹ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರದ ಜತೆ ನಿಂತು ಸಲಹೆ ನೀಡುವ ಮೂಲಕ ಜನಹಿತ ಕಾಪಾಡಬೇಕಿದ್ದ ಪ್ರತಿಪಕ್ಷ ಕಾಂಗ್ರೆಸ್, ಪಾದಯಾತ್ರೆ ಹೆಸರಿನಲ್ಲಿ ಕೊರೊನಾ ಹರಡುವ ಮೂಲಕ ಅಮಾಯಕ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದರ ನಿಯಂತ್ರಣಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ.
ಈ ನಡುವೆ ಕಾಂಗ್ರೆಸ್ ಪಾದಯಾತ್ರೆ ಹೆಸರಿನಲ್ಲಿ ಜನರ ಗುಂಪು ಕಟ್ಟಿಕೊಂಡು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರುತ್ತಿದೆ.
ಈಗಾಗಲೇ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.
ಇವರ ಜತೆಯಲ್ಲಿ ಹೆಜ್ಜೆ ಹಾಕಿದವರಿಗೂ ಸೋಂಕು ಹರಡುವ ಸಾಧ್ಯತೆಯಿದೆ.
ಜನಜಾತ್ರೆ ಮಾಡಿಕೊಂಡು ಬೆಂಗಳೂರಿಗೆ ಕೋವಿಡ್ ಹಬ್ಬಿಸುವ ಕೆಲಸ ಮಾಡುತ್ತಿರುವುದರಿಂದ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಸೋಮಶೇಖರ್ ಆತಂಕ ವ್ಯಕ್ತಪಡಿಸಿದರು.