CSKನಲ್ಲೇ ಧೋನಿ ಫಿಕ್ಸ್…? ಮಾಲೀಕ ಶ್ರೀನಿವಾಸನ್ ಮಾತಿನ ಅರ್ಥವೇನು..?
ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿ ವರ್ಷ ಕಳೆದರೂ ತನ್ನಲ್ಲಿನ ಕ್ಯಾಪ್ಟನ್ಸಿ ಕಸುವು ಕಡಿಮೆ ಆಗಿಲ್ಲ ಅನ್ನುವುದನ್ನು ಸಾಭೀತು ಮಾಡಿದ್ದಾರೆ. ಐಪಿಎಲ್ 14ನೇ ಆವೃತ್ತಿಯಲ್ಲಿ ಚೆನ್ನೈ ಚಾಂಪಿಯನ್ ಆಗಲು ಕ್ಯಾಪ್ಟನ್ ಧೋನಿಯ ಶ್ರಮ ಎಷ್ಟಿದೆ ಅನ್ನುವುದು ತಂಡದ ಆಟಗಾರರಿಂದಲೇ ಅರಿವಾಗಿದೆ. ಮುಂದಿನ ವರ್ಷದ ಐಪಿಎಲ್ಗೆ ಮೆಗಾ ಆಕ್ಷನ್ ಇರುವ ಕಾರಣ ಎಲ್ಲ ತಂಡಗಳಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಒಂದು ತಂಡದಲ್ಲಿ ಕನಿಷ್ಠ ಎರಡು ಅಥವಾ ಮೂರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದಾಗಿದೆ ಎಂಬ ಮಾತುಕೂಡ ಇದೆ. ಇದರ ನಡುವೆ ಧೋನಿ ಸಿಎಸ್ಕೆ ತಂಡದಲ್ಲೇ ಮುಂದುವರೆಯುತ್ತಾರ ಎಂಬ ಗೊಂದಲ ಕೂಡ ಇದೆ. ಇದಕ್ಕೆ ಸಿಎಸ್ಕೆ ಮಾಲೀಕ ಎನ್ ಶ್ರೀನಿವಾಸನ್ ಉತ್ತರ ನೀಡಿದ್ದಾರೆ. ಆಕ್ಷನ್ ಮತ್ತು ರಿಟೆನ್ಷನ್ ಬಗ್ಗೆ ಬಿಸಿಸಿಐ ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ಎಲ್ಲರಿಗೂ ಕುತೂಹವಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್. ಶ್ರೀನಿವಾಸನ್ ಐಪಿಎಲ್ ಟ್ರೋಫಿಯೊಂದಿಗೆ ಚೆನ್ನೈನ ವೆಂಕಟಾಚಲಪತಿ ದೇಗುಲಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸನ್, ಐಪಿಎಲ್ನಲ್ಲಿ ಸಿಎಸ್ಕೆ ತಂಡದ ಗೆಲುವು ಇಡೀ ಚೆನ್ನೈಯನ್ನು ವಿಶ್ವದ ಅಗ್ರಸ್ಥಾನಕ್ಕೇರಿಸಿದೆ ಎಂದಿದ್ದಾರೆ. ಧೋನಿಯನ್ನು ಮುಂದಿನ ಆವೃತ್ತಿಯಲ್ಲಿ ರೀಟೈನ್ ಮಾಡಿಕೊಳ್ಳುವ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ. ರಿಟೈನ್ ಬಗ್ಗೆ ನಿಯಮಾವಳಿಗಳು ಇನ್ನೂ ಬಂದಿಲ್ಲ. ಧೋನಿ ಸಿಎಸ್ಕೆ ತಂಡದ ಮತ್ತು ತಮಿಳುನಾಡಿದ ಅವಿಭಾಜ್ಯ ಅಂಗವಾಗಿದ್ದಾರೆ. ಧೋನಿಯಿಲ್ಲದೆ ಸಿಎಸ್ಕೆ ಇಲ್ಲ, ಸಿಎಸ್ಕೆ ಇಲ್ಲದೆ ಧೋನಿಯಿಲ್ಲ” ಎಂದು ಹೇಳಿರುವುದು ಸಿಎಸ್ ಕೆ ಧೋನಿಗೆ ಕೊಟ್ಟಿರುವ ಮಹತ್ವವನ್ನು ತಿಳಿಸುತ್ತಿದೆ.
ಸದ್ಯ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ನಲ್ಲಿ ಆಡುತ್ತಿರುವ ಟೀಮ್ ಇಂಡಿಯಾಕ್ಕೆ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ಐಪಿಎಲ್ ಹೊತ್ತಿಗೆ ಧೋನಿ ಸಿಎಸ್ ಕೆ ತಂಡದಲ್ಲಿ ಆಟಗಾರನಾಗಿ ಅಥವಾ ಮೆಂಟರ್ ಆಗಿ ಮುಂದುವರೆಯಬಹುದು ಅನ್ನುವ ಲೆಕ್ಕಾಚಾರವಿದೆ.