ಅಮೇರಿಕನ್ ಯಾತ್ರೆ:- ಚಿನ್ನದ ನಾಡೆಂದು ಕ್ಯಾಲಿಫೋರ್ನಿಯಾವನ್ನು ಸುಮ್ಮನೆ ಕರೆಯುವುದಿಲ್ಲ: Saakshatv yatrika episode 2
ನಾನು ಅಮೆರಿಕಾಗೆ ಬಂದ ಶುರುವಿನ 7 ತಿಂಗಳುಗಳ ಕಾಲ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಎಂಜಿಲಿಸ್‌ನಲ್ಲಿದ್ದೆ. Saakshatv yatrika episode 2

ಹೆಚ್ಚುಕಮ್ಮಿ ಭಾರತೀಯರೆಲ್ಲಾ ಈ ರಾಜ್ಯದ ಹೆಸರನ್ನ ಕೇಳಿಯೇ ಇರುತ್ತಾರೆ. ಪ್ರವಾಸೋದ್ಯಮದಲ್ಲಿ, ನೈಸರ್ಗಿಕ ಸೌಂದರ್ಯದಲ್ಲಿ, ಆರ್ಥಿಕತೆಯಲ್ಲಿ, ಜನಸಂಖ್ಯೆಯಲ್ಲಿ, ಶಿಕ್ಷಣದಲ್ಲಿ ಯಾವುದೇ ಕ್ಷೇತ್ರ ತೆಗೆದುಕೊಳ್ಳಿ ಎಲ್ಲದರಲ್ಲೂ ಇವರು ಒಂದು ಕೈ ಮುಂದೆ. ಒಂದು ವೇಳೆ ಸ್ವಂತಂತ್ರ ದೇಶವಾಗಿದ್ದಿದ್ದರೂ ಕೂಡ ವಿಶ್ವದ ಮುಂಚೂಣಿ ದೇಶಗಳ ಸಾಲಿನಲ್ಲಿ ನಿಲ್ಲುತ್ತಿತ್ತು. ಒಂದು ಅದ್ಭುತ ರಾಜ್ಯ ಹೀಗಿರಬೇಕು ಅನ್ನುವುದಕ್ಕೆಂದೇ ಸೃಷ್ಟಿ ಮಾಡಿಟ್ಟ ಹಾಗಿದೆ. ಈ ರಾಜ್ಯಕ್ಕೆ ‘ಚಿನ್ನದ ನಾಡು’ ಎಂಬ ಅಡ್ಡಹೆಸರಿಟ್ಟುರುವುದು ಸುಮ್ಮನೇ ಅಲ್ಲ. ಇದರ ಬಗ್ಗೆ ಒಂದೇ ಪೋಸ್ಟಿನಲ್ಲಿ ಹೇಳುವುದು ಕಷ್ಟ. ಎರಡು ಮೂರು ಕಂತಿನಲ್ಲಿ ನನ್ನಿಂದಾದಷ್ಟು ತಿಳಿಸಲು ಪ್ರಯತ್ನಿಸುತ್ತೇನೆ.
ಈ ನಾಡು ಕೇವಲ ಭಾರತೀಯರಿಗಲ್ಲ, ಅಮೆರಿಕನ್ನರಿಗೂ ಕನಸಿನ ತಾಣವೇ. ಹಾಗೆ ಅಷ್ಟು ಜನರನ್ನ ಆಕರ್ಷಿಸಲು ಇರುವ ಕಾರಣಗಳಾದರೂ ಏನು? ಮೊದಲನೆಯದಾಗಿ ವಾತಾವರಣದ ವಿಷಯಕ್ಕೆ ಬರೋಣ. ಪೂರ್ವ ಕರಾವಳಿ, ಪಂಚ ಮಹಾಸರೋವರಗಳ ಸುತ್ತಲಿನ ಪ್ರದೇಶಗಳಲ್ಲಿ ಇರುವಂತಹ ಹವಾಮಾನ ವೈಪರೀತ್ಯಗಳಾಗಲೀ, ಫ್ಲೋರಿಡಾ ಟೆಕ್ಸಸ್‌ಗಳಲ್ಲಿ ಆಗಾಗ ಸಂಭವಿಸುವಂತಹ ನೈಸರ್ಗಿಕ ದುರಂತಗಳಾಗಲಿ, ಇಲ್ಲಿಲ್ಲ. ಇಲ್ಲ ಅಂದರೆ ಇಲ್ಲವೇ ಇಲ್ಲ ಅಂತಲ್ಲ, ಅಂತಹ ಪ್ರದೇಶಗಳು ಜನನಿಬಿಡ ಪ್ರದೇಶಗಳಿಂದ ದೂರದಲ್ಲಿವೆ. ಅತ್ಯಂತ ವಾಸಯೋಗ್ಯ ಸ್ಥಳವಾದ ಶಾಂತಸಾಗರದ ತೀರ ಪ್ರದೇಶಗಳು ನಿಜಕ್ಕೂ ಅದ್ಭುತ ಹವಾಮಾನ ಹೊಂದಿವೆ. ಆದರೆ ವಿಚಿತ್ರವೆಂದರೆ ಇದನ್ನೂ ಕೆಲ ಕಾರಣಕ್ಕೆ ದ್ವೇಷಿಸುತ್ತಾರೆ. ವಾತಾವರಣದ ಬದಲಾವಣೆಗಳೇ ಇಲ್ಲದ ಅಲ್ಲಿ ಯಾವನಿರ್ತಾನೆ ಅಂತ ನನಗೆ ವಾಹನ ಚಾಲನೆ ಕಲಿಸಿಕೊಟ್ಟಿದ್ದ ಮಿಲಿಟರಿ ತಾತ ಅಸಹನೆ ವ್ಯಕ್ತಪಡಿಸಿದ್ದರು.
ಅಮೇರಿಕನ್ ಯಾತ್ರೆ: ನೇಟಿವ್ ಅಮೇರಿಕನ್ನರ ತವರು ಓಕ್ಲಹೋಮಾ ಎಂಬ ಕಟ್ಟರ್ ಸಂಪ್ರದಾಯಸ್ಥ ಕ್ರೈಸ್ತರ ನೆಲೆವೀಡಿನ ಕುರಿತು
ವ್ಯವಸಾಯದಲ್ಲಿ ಕೂಡ ಕ್ಯಾಲಿಫೋರ್ನಿಯಾ ಒಂದು ಕೈ ಮೇಲೇ. ಪ್ರಪಂಚದ 80% ಬಾದಾಮಿ ಈ ರಾಜ್ಯದಿಂದ ಬರುತ್ತದೆ ಎಂದು ಗೊತ್ತಾದಾಗ ನನಗೆ ಬಹಳ ಆಶ್ಚರ್ಯವಾಗಿತ್ತು. ಬಾದಾಮಿ ಮಾತ್ರವಲ್ಲ ಆಹಾರ ಧಾನ್ಯಗಳು, ಹಣ್ಣುಗಳು ಮುಂತಾದವುಗಳು ಕೂಡಾ ಹೇರಳ ಪ್ರಮಾಣದಲ್ಲಿ ಬೆಳೆಯಲ್ಪಡುತ್ತವೆ. ಒಮ್ಮೆ ನಾವು ಪ್ರವಾಸಕ್ಕೆ ಹೋಗಿದ್ದಾಗ ಚಿಕ್ಕ ಪುಟ್ಟ ಗುಡ್ಡಗಳ ದಾಟಿ ಅತ್ಯಂತ ವಿಸ್ತಾರವಾದ ಬಯಲು ಪ್ರದೇಶಕ್ಕೆ ನಮ್ಮ ಬಸ್ಸು ಪ್ರವೇಶಿಸಿದಾಗ ಆಶ್ಚರ್ಯವಾಗಿತ್ತು. ಮುಗಿದರೂ ಮುಗಿಯದಷ್ಟು ದೂರದವರೆಗೆ ಕೃಷಿ ಭೂಮಿಗಳು ಕಾಣುತ್ತಿದ್ದವು. ಕುತೂಹಲ ತಡೆಯಲಾಗದೇ ಅಲ್ಲೇ ಆ ಪ್ರದೇಶದ ಬಗ್ಗೆ ಹುಡುಕಿದ್ದೆ. ಅದು ಕ್ಯಾಲೊಫೋರ್ನಿಯಾದ ಮಧ್ಯ ಕಣಿವೆ. ಹೆಸರೇ ಹೇಳುವಂತೆ ಅಲ್ಲಿನ ಕೇಂದ್ರಭಾಗದಲ್ಲಿನ ವಿಸ್ತಾರವಾದ ಬಯಲು ಭೂಮಿ. ಪ್ರಪಂಚದ ಅತ್ಯುತ್ತಮ ಕೃಷಿ ಪ್ರದೇಶಗಳಲ್ಲಿ ಒಂದು. ಅದೇ ನೀವು ಕ್ಯಾಲಿಫೋರ್ನಿಯಾದ ಉತ್ತರ ಭಾಗದಲ್ಲಿರುವ ನಾಪಾ ಕಣಿವೆಗೆ ಹೋದರೆ ಉತ್ತಮ ದರ್ಜೆಯ ದ್ರಾಕ್ಷಿಯನ್ನು ಬೆಳೆಯುತ್ತಾರೆ. ಅದಕ್ಕೆ ನಾಪಾ ಕಾಣಿವಯ ವೈನುಗಳು ಬಹು ಪ್ರಸಿದ್ಧ. ಸರಿ ಅಲ್ಲಿ ಬಾದಾಮಿ ಬೆಳಿತಾರೆ, ದ್ರಾಕ್ಷಿ ಬೆಳಿತಾರೆ, ಇತರ ಹಣ್ಣುಗಳಾಯ್ತು, ಆಹಾರ ಧಾನ್ಯಗಳಾಯ್ತು, ಹಾಲಿನ ಉತ್ಪನ್ನಗಳಾಯ್ತು ಮತ್ತೇನು?
ನಂಬುವುದಕ್ಕೆ ಕಷ್ಟ, ಕ್ಯಾಲಿಫೋರ್ನಿಯಾದ ನಾಲ್ಕನೇ ದೊಡ್ಡ ಕೃಷಿ ಉತ್ಪನ್ನ ಗಾಂಜಾ. ಮೆರುವಾನಾ ಅಥವಾ ಗಾಂಜಾವನ್ನು ಇಲ್ಲಿ ಮನೋರಂಜನೆಯ ಉದ್ದೇಶಕ್ಕೆ ಬಳಸುವುದನ್ನ ಕಾನೂನುಬದ್ಧಗೊಳಿಸಲಾಗಿದೆ (ಕ್ಯಾಲಿಫೋರ್ನಿಯಾ ಮತ್ತು ಇನ್ನೂ ಹಲವು ರಾಜ್ಯಗಳಲ್ಲಿ ಇದು ಲೀಗಲ್). ನಿಗದಿತ ವಯಸ್ಸನ್ನು ದಾಟಿದ ಯಾವುದೇ ವ್ಯಕ್ತಿ ತನ್ನ ಗುರುತಿನ ಚೀಟಿ ತೋರಿಸಿ ತರಕಾರಿ ತೆಗೆದುಕೊಳ್ಳುವಂತೆ ನಿಗದಿತ ಪ್ರಮಾಣದ ಗಾಂಜಾ ತೆಗೆದುಕೊಳ್ಳಬಹುದು. ಆದ್ದರಿಂದ ಕೆಲ ಅನುಮತಿಯೊಡನೆ ರಾಜಾರೋಶವಾಗಿ ಗಾಂಜಾ ಕೃಷಿ ,ಸಾಗಾಣಿಕೆ ಮಾಡಬಹುದು (ಇದರಲ್ಲಿ ದೊಡ್ಡಪಾಲು ವೈದ್ಯಕೀಯ ಬಳಕೆಗೆ ಹೋಗುತ್ತದೆ). ಒಂದು ವಿಷಯ ಮೆರುವಾನಾಗೆ ಅನುಮತಿಯಿದೆ ಅಂದ ಮಾತ್ರಕ್ಕೆ ಆ ವಿಷಯದಲ್ಲಿ ಸ್ವೇಚ್ಛೆಯಿದೆ ಅಂತ ಅಲ್ಲ. ಅದಕ್ಕೆ ಸೇವನೆಗಾಗಲೀ ಕೃಷಿಗಾಗಲೀ ಕಟ್ಟುನಿಟ್ಟಾದ ನೀತಿ ನಿಯಮಗಳಿವೆ, ಅದಕ್ಕೇ ಅದು ಅಲ್ಲಿ ಸಾಮಾಜಿಕ ಪಿಡುಗಾಗಿಲ್ಲ.

ರಾಜ್ಯದ ಹೆಚ್ಚಿನ ಜನಸಂಖ್ಯೆ ಸ್ಥಿತವಾಗಿರುವುದು ಮುಖ್ಯವಾಗಿ ಎರಡು ಪ್ರದೇಶಗಳಲ್ಲಿ. ಸ್ಯಾನ್ ಫ್ರಾನ್‌ಸಿಸ್ಕೋ ಮತ್ತಿತ್ತರ ನಗರಗಳನ್ನು ಒಳಗೊಂಡ ಕೊಲ್ಲಿ ಪ್ರದೇಶ ಮತ್ತು ಲಾಸ್ ಎಂಜಿಲಿಸ್, ಸ್ಯಾನ್ ಡಿಯಾಗೋ ಮೊದಲಾದ ನಗರಗಳ ದಕ್ಷಿಣ ಕ್ಯಾಲಿಫೋರ್ನಿಯಾ. ಇದನ್ನ ಬಿಟ್ಟು ರಾಜಧಾನಿಯಾದ ಸ್ಯಾಕ್ರಮೆಂಟೋ, ಫ್ರೆಸ್ನೋ ಮುಂತಾದ ಕೆಲ ನಗರ ಪ್ರದೇಶಗಳಿವೆ.
ಈಗಲೇ ತುಂಬಾ ಹೇಳಿ ಬೋರು ಹೊಡೆಸಲ್ಲ. ಮುಂದಿನ ಪೋಸ್ಟಿನಲ್ಲಿ ಅಲ್ಲಿನ ಉದ್ಯಮಗಳ ಕುರಿತು ಹೇಳಲು ಪ್ರಯತ್ನಿಸುತ್ತೇನೆ.
ವಿ.ಸೂ:- ಪಟಕ್ಕೆ ಪ್ರತ್ಯೇಕ ವಿವರಣೆ ಬೇಕಿಲ್ಲ. ಸ್ಯಾನ್ ಫ್ರಾನ್ಸಿಸ್ಕೋದ ಸ್ವರ್ಣಸೇತುವಿನ ದೃಷ್ಯ.
ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ
-ಗಿರಿಧರ್ ಭಟ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಹಾಗೂ ಹವ್ಯಾಸಿ ಬರಹಗಾರ
ಸಿದ್ಧಾಪುರ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ








