ಶರದ್ ಪವಾರ್ ರಿಂದ ಸಚಿನ್ ತೆಂಡುಲ್ಕರ್ ಗೆ ರಾಜಕೀಯ ಪಾಠ..!
ನಮ್ಮದಲ್ಲದ ಕ್ಷೇತ್ರದ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಬೇಕು ಎಂದು ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್ ಗೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಹಾಗಿದ್ರೆ ಶರದ್ ಪವಾರ್ ಬಿಸಿಸಿಐ ಅಧ್ಯಕ್ಷರಾಗಿರುವುದನ್ನು ಮರೆತಂತಿದೆ. ರಾಜಕೀಯ ಕ್ಷೇತ್ರದಲ್ಲಿರುವ ಶರದ್ ಪವಾರ್ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು ಎಷ್ಟರ ಮಟ್ಟಿಗೆ ಸರಿ. ದಿ. ಜಗನ್ ಮೋಹನ್ ದಾಲ್ಮಿಯ ಅವರನ್ನು ಮಣಿಸಲೇಬೇಕು ಎಂದು ತನ್ನ ಪ್ರಭಾವವನ್ನು ಬಳಸಿಕೊಂಡು ಬಿಸಿಸಿಐ ಅಧ್ಕಕ್ಷಗಾದಿಯನ್ನು 2005ರಲ್ಲಿ ಏರಿದ್ದರು. ಆದಾದ ನಂತರ 2010ರಲ್ಲಿ ಐಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಹಾಗಂತ ಶರದ್ ಪವಾರ್ ಬಿಸಿಸಿಐ ಮತ್ತು ಐಸಿಸಿ ಅಧ್ಯಕ್ಷರಾಗಿರುವುದು ತಪ್ಪೇನೂ ಅಲ್ಲ. ಆದ್ರೆ ಸಚಿನ್ ಮಾತನಾಡಿರುವುದರಲ್ಲಿ ತಪ್ಪೇನಿದೆ. ಒಪ್ಪಿಕೊಳ್ಳೋಣ.. ಸಚಿನ್ ತೆಂಡಲ್ಕರ್ ರೈತರ ಪ್ರತಿಭಟನೆಯ ಬಗ್ಗೆ ಏನು ಮಾತನಾಡಿಲ್ಲ. ರೈತರ ಪ್ರತಿಭಟನೆಯ ಪರವಾಗಿಯೂ ಮಾತನಾಡಿಲ್ಲ..ವಿರುದ್ಧವಾಗಿಯೂ ಮಾತನಾಡಿಲ್ಲ. ತಟಸ್ಥ ನಿಲುವನ್ನು ಹೊಂದಿದ್ದಾರೆ.
ಆದ್ರೆ ರಿಯಾನ ಟ್ವಿಟ್ ಪ್ರತಿಕ್ರಿಯೆ ನೀಡಿರುವುದೇ ದೊಡ್ಡ ತಪ್ಪು ಅಂತ ಬಿಂಬಿಸಲಾಗುತ್ತಿದೆ. ಅಷ್ಟಕ್ಕೂ ಸಚಿನ್ ಹೇಳಿಕೆಯನ್ನು ದೇಶ ದ್ರೋಹಿ ಎಂಬಂತೆ ಪ್ರಚಾರ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಸಚಿನ್ ತೆಂಡುಲ್ಕರ್ ಹೇಳಿರೋದು ಏನು.. ದೇಶದ ಅಂತರಿಕ ವಿಚಾರದಲ್ಲಿ ಬೇರೆಯವರು ಮಾತನಾಡುವುದು ಬೇಡ ಎಂದು ಹೇಳಿದ್ದಾರೆ. ಅದು ಅವರ ಅಭಿವ್ಯಕ್ತ ಸ್ವಾತಂತ್ರ್ಯ. ಹಾಗಂತ ಅದನ್ನೇ ಪ್ರಶ್ನೆ ಮಾಡಿಕೊಂಡು ಅವರ ವ್ಯಕ್ತಿತ್ವವನ್ನೇ ಪ್ರಶ್ನೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ… ಒಂದು ವೇಳೆ ಸಚಿನ್ ತೆಂಡುಲ್ಕರ್ ರೈತರ ಪ್ರತಿಭಟನೆಯ ಪರವಾಗಿ ಮಾತನಾಡುತ್ತಿದ್ರೆ ಸಚಿನ್ ಕ್ರಿಕೆಟ್ ದೇವ್ರು ಮಾತ್ರವಲ್ಲ.. ಭಾರತದ ದೇವ್ರರಾಗುತ್ತಿದ್ದರಾ ? ಹಾಗೇ ಸಚಿನ್ ಪ್ರತಿಭಟನೆಯ ವಿರುದ್ಧವಾಗಿ ಮಾತನಾಡುತ್ತಿದ್ರೆ ಇನ್ನೊಂದು ವರ್ಗಕ್ಕೆ ವಿಲನ್ ಆಗಿರುತ್ತಿದ್ದರು.
ಇಲ್ಲಿ ಇನ್ನೊಂದು ಪ್ರಶ್ನೆ ಇದೆ. ಈ ದೇಶದಲ್ಲಿ ಮೋದಿ, ಅಮಿತ್ ಶಾ ಬಿಟ್ರೆ ಬೇರೆ ನಾಯಕರೇ ಇಲ್ವಾ ? ಅಂಬಾನಿ ಬಿಟ್ರಿ ಬೇರೆ ಉದ್ಯಮಿಗಳೇ ಇಲ್ವಾ ? ಮಾತು ಮಾತಿಗೂ ಮೋದಿ, ಅಮಿತ್ ಶಾ, ಅಂಬಾನಿ ಅಂತ ಬಿಟ್ಟಿ ಪ್ರಚಾರವನ್ನು ನೀಡುತ್ತಿದ್ದಾರೆ. ಹೀಗಾಗಿಯೇ ಅವರು ದೊಡ್ಡ ಸೆಲೆಬ್ರಿಟಿಗಳಾಗಿದ್ದಾರೆ. ಅದನ್ನು ಬಿಟ್ಟು ಬೇರೆ ನಾಯಕರ ಬಗ್ಗೆ ಯಾರು ಮಾತನಾಡುತ್ತಿಲ್ಲ.
ಇನ್ನು, ರೈತರ ಪ್ರತಿಭಟನೆಗೆ ಬಹುತೇಕ ವಿರೋಧ ಪಕ್ಷಗಳು ಬೆಂಬಲ ವ್ಯಕ್ತ ಪಡಿಸುತ್ತಿವೆ. ಪ್ರತಿಭಟನೆ ಪಂಜಾಬ್ ಮತ್ತು ಹರಿಯಾಣ ರೈತರಿಗೆ ಮಾತ್ರ ಸೀಮಿತವಾಗಿದೆಯಾ ?
ನೂತನ ಕೃಷಿ ನೀತಿಯ ಮೂರು ಕಾಯ್ದೆಗಳು ರೈತ ವಿರೋಧಿಯಾಗಿರುತ್ತಿದ್ರೆ, ಎಲ್ಲಾ ರಾಜ್ಯಗಳ ವಿಪಕ್ಷ ಪಕ್ಷಗಳ ನಾಯಕರು ಸುಮ್ಮನೆ ಯಾಕೆ ಕೂರುತ್ತಿದ್ದಾರೆ. ಆಯ್ತು ಆಡಳಿತರೂಢ ರಾಜ್ಯಗಳ ನಾಯಕರು ಯಾಕೆ ಮೌನಕ್ಕೆ ಶರಣಾಗಿದ್ದಾರೆ.
ರೈತರ ಪ್ರತಿಭಟನೆಯ ಸ್ಥಳಕ್ಕೆ ಹೋಗಿ ಭಾಷಣ ಮಾಡಿದ್ರೆ ಎಲ್ಲವೂ ಸರಿ ಹೋಗುತ್ತದೆಯಾ ? ರೈತ ಪರ ನಿಲುವನ್ನು ಹೊಂದಿರುವ ರಾಜಕೀಯ ಪಕ್ಷಗಳ ಮುಖಂಡರುಗಳು ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ ರೈತರಂತೆ ಹೋರಾಟ ಯಾಕೆ ಮಾಡುತ್ತಿಲ್ಲ…!
ಇಲ್ಲಿ ಹೋರಾಟ ಮಾಡುವ ಮನೋಭಾವನೆ ಯಾರಿಗೂ ಇಲ್ಲ. ವಿರೋಧ ವ್ಯಕ್ತಪಡಿಸಬೇಕು.. ವಿರೋಧಿಸಬೇಕು.. ಅಷ್ಟಕ್ಕೆ ಸೀಮಿತವಾಗಿದೆ. ಅದಕ್ಕೆ ತಕ್ಕಂತೆ ಸಾಮಾಜಿಕ ಜಾಲ ತಾಣವಿದೆಯಲ್ಲ..ಅಭಿವ್ಯಕ್ತಿಯ ಸ್ವಾತಂತ್ರ್ಯದ ವೇದಿಕೆ. ಅಲ್ಲಿ ಬರೆದ್ರೆ ಮುಗಿದು ಹೋಯ್ತು…!
ಇನ್ನು ಸಚಿನ್ ವಿಚಾರಕ್ಕೆ ಬರೋದಾದ್ರೆ, ಕೆಲವರು ಸಚಿನ್ ಏನು ಸಾಧನೆ ಮಾಡಿದ್ದಾನೆ… ಮಗನ ಕೆರಿಯರ್ ಗೋಸ್ಕರ ಅಂಬಾನಿ, ಅಮಿತ್ ಶಾ ಅವರನ್ನು ಒಲೈಕೆ ಮಾಡುತ್ತಿದ್ದಾನೆ ಅಂತ ಕಮೆಂಟ್ ಗಳು ಬಂದಿವೆ.
ಸಚಿನ್ ಮಗನಿಗೋಸ್ಕರ ಎಲ್ಲವನ್ನೂ ಮಾಡಿದ್ದಾನೆ. ಅವನಿಗೆ ಕ್ರಿಕೆಟ್ ಆಡಿ ದುಡ್ಡು ಸಂಪಾದನೆ ಮಾಡಬೇಕು ಅಂತೇನೂ ಇಲ್ಲ. ಯಾಕಂದ್ರೆ ಸಚಿನ್ ಕ್ರಿಕೆಟ್ ಮತ್ತು ಜಾಹಿರಾತಿನಿಂದಲೇ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದಾರೆ. ಅಂಬಾನಿ ಜೊತೆ ನಿಂತುಕೊಂಡು ಹಣ ಮಾಡುವ ದುರಾಸೆ ಇಲ್ಲ.
ಇನ್ನು ಏನು ಸಾಧನೆ ಮಾಡಿದ್ದಾನೆ ಅಂತರಲ್ಲ.. ಅವರಿಗೆ ತಾವು ಏನು ಸಾಧನೆ ಮಾಡಿದ್ದೀರಿ ಅನ್ನೋದನ್ನು ಸ್ವಲ್ಪ ಯೋಚಿಸಬೇಕು… ಅಂತಾರಾಷ್ಟ್ರೀಯ ಮಟ್ಟದಲ್ಲಿ ರನ್ ಗಳಿಸುವುದು , ಶತಕ ಸಿಡಿಸೋದು ಮಾತಿನಲ್ಲಿ ಹೇಳಿದ್ದಷ್ಟು ಸುಲಭವಲ್ಲ. ಅಲ್ಲದೆ ಸ್ವಾರ್ಥಿ ಅಂತಿರಲ್ಲ… ಈ ಮನು ಕುಲದಲ್ಲಿ ಸ್ವಾರ್ಥ ಇಲ್ಲದ ವ್ಯಕ್ತಿ ಯಾರು ಇದ್ದಾರೆ. ಪ್ರತಿಯೊಬ್ಬರು ಸ್ವಾರ್ಥಕ್ಕಾಗಿಯೇ ಬದುಕು ಸಾಗಿಸೋದು… ಅದು ರಾಮನೂ ಇರಬಹುದು.. ಕೃಷ್ಣನೂ ಇರಬಹುದು.. ಬುದ್ಧನೂ ಇರಬಹುದು.. ಪ್ರತಿಯೊಬ್ಬರಲ್ಲೂ ಸ್ವಾರ್ಥ ಇದ್ದೇ ಇರುತ್ತೆ. ದೇವರಲ್ಲಿಯೇ ಸ್ವಾರ್ಥ ಇರುವಾಗ ಮನುಷ್ಯರಲ್ಲಿ ಇರುವುದರಲ್ಲಿ ತಪ್ಪೇನಿಲ್ಲ.