ಸಚಿನ್ ಮೆಲುಕು | ಶ್ರೀ ರಾಮನ ಗುಣ.. ಅರ್ಜುನನ ಲಕ್ಷ್ಯ..

1 min read

ಕ್ರಿಕೆಟ್ ಬಹ್ಮನ ಹೆಜ್ಜೆ –ಗೆಜ್ಜೆ -7
ಸಚಿನ್ ವ್ಯಕ್ತಿತ್ವ
ಸಚಿನ್ ತೆಂಡುಲ್ಕರ್ ಮಹಾನ್ ಸಾಧಕ.. ತನಗೆ ಬೇಕು ಅಂದುಕೊಂಡಿದ್ದನ್ನ ಪಡೆಯುವ ಹಠಮಾರಿ. ಅಷ್ಟೇ ಯಾಕೆ, ಕ್ರಿಕೆಟ್ ಆಟವನ್ನ ಸಿದ್ದಿಸಿಕೊಂಡ ಋಷಿ..ಇದ್ರಿಂದಲೇ ಅಭಿಮಾನಿಗಳು ಪ್ರೀತಿಯಿಂದ ಕ್ರಿಕೆಟ್ ದೇವ್ರು ಅಂದ್ರು. ಮತ್ತೆ ಕೆಲವರು ಪವಾಡಪುರುಷ ಅಂದ್ರು. ಹಾಗಿದ್ರೆ ಈ ಯುಗಪುರುಷನ ಹಿಂದಿರುವ ಶಕ್ತಿಯಾದ್ರೂ ಏನೂ ?..

ಆತನಲ್ಲಿ…. ಮಾತಿಗೆ ತಪ್ಪದ ಶ್ರೀ ರಾಮನ ಗುಣವಿದೆ… ಅರ್ಜುನನ ಲಕ್ಷ್ಯವಿದೆ…ದ್ರೋಣಚಾರ್ಯರ ಸೇಡಿನ ಕಿಚ್ಚಿದೆ.. ಭೀಷ್ಮನ ಪ್ರತಿಜ್ಞೆ ಇದೆ..ಕರ್ಣನ ತ್ಯಾಗವೂ ಇದೆ..ಸುಯೋಧನನ ಸ್ನೇಹ ಹಸ್ತವೂ ಇದೆ…ಪರಶುರಾಮನ ಏಕಾಗ್ರತೆ ಇದೆ.. ಬುದ್ದನ ಶಾಂತಿಯ ಮಂತ್ರವೂ ಇದೆ. ಹೌದು ಸಚಿನ್ ರಮೇಶ್ ತೆಂಡುಲ್ಕರ್ ಇವೆಲ್ಲವನ್ನ ಆಪೋಷನ ಮಾಡಿಕೊಂಡಿದ್ದಾಗಿದೆ. .

ನಿಜ, ಈ ಬ್ಯಾಟಿಂಗ್ ವೈಖರಿಗೆ ತಲೆಬಾಗದವರಿಲ್ಲ… ಹಾಗಂತ ಶೃಂಗಾರ ಕಾವ್ಯಕ್ಕೆ ಹೋಲಿಕೆಯೂ ಅಲ್ಲ. ಕ್ರಿಕೆಟ್ ದಂತಕತೆಗಳಿಗೆ ಪೈಪೋಟಿಯೂ ಅಲ್ಲ. ಆದ್ರೂ ಸಚಿನ್ ಬ್ಯಾಟಿಂಗ್ನಲ್ಲಿ ಡಾನ್ ಬ್ರಾಡ್ಮನ್ ಸ್ಟೈಲ್ ಇದೆ… ಕ್ಲೈವ್ ಲಾಯ್ಡ್ ನ ಕಲಾತ್ಮಕೆ ಇದೆ…ವಿವಿಯನ್ ರಿಚಡ್ಸನ್ ಅವ್ರ ಆಕ್ರಮಣಕಾರಿ ಇದೆ. ಗವಾಸ್ಕರ್ನ ಏಕಾಗ್ರತೆ ಇದೆ.

ಕಪಿಲ್ದೇವ್ನ ಛಲವಿದೆ. ಈ ಎಲ್ಲಾ ಗುಣಗಳನ್ನ ಮೈಗೂಡಿಸಿಕೊಂಡ ಸಚಿನ್ಗೆ ಇವತ್ತು ಕ್ರಿಕೆಟ್ ಜಗತ್ತೆ ಸಲಾಂ ಅನ್ನುತ್ತಿದೆ.
ಮೈದಾನದಲ್ಲಿ ಸೋತಾಗ ಅಂಜಲಿಲ್ಲ.. ಗೆದ್ದಾಗ ಬೀಗಲಿಲ್ಲ. ಶತಕ ಸಿಡಿಸಿದಾಗ ಅಹಂ ಪಡಲಿಲ್ಲ. ಕ್ರಿಕೆಟ್ ಸಾಮ್ರಾಟನಾದ್ರೂ ಮೆರೆದಾಡಲಿಲ್ಲ.

Sachin Tendulkar saaksha tv

ಕಲಿಯುವ ಗುಣ ಇನ್ನೂ ಬತ್ತಿಲ್ಲ ಹಿರಿಯ ಕ್ರಿಕೆಟಿಗರ ಸಲಹೆಗಳನ್ನ ಕಡೆಗಣಿಸಲಿಲ್ಲ. ಒಡನಾಡಿಗಳ ಜತೆ ಕೇವಲವಾಗಿ ಮಾತನಾಡಿಲ್ಲ.. ..ಎದುರಾಳಿ ಆಟಗಾರರನ್ನ ಲಘುವಾಗಿಯೂ ಪರಿಗಣಿಸಲಿಲ್ಲ.. ಕ್ರಿಕೆಟ್ ಹೇಳಿಕೊಟ್ಟ ಗುರುವನ್ನ ಮರೆಯಲಿಲ್ಲ.. ಇದಕ್ಕೆ ಅನ್ನೋದು ಸಚಿನ್ ಎಲ್ಲಾ ಕ್ರಿಕೆಟಿಗರಂತೆ ಅಲ್ಲ.

ಹಾಗಾದ್ರೆ ಸಚಿನ್ ತೆಂಡುಲ್ಕರ್ ಅವತರಾ ಪುರುಷನಾ..? . ಹೌದು ಅನ್ನುವವರಿಗೆ ಹೌದು.. ಅಲ್ಲ ಅನ್ನುವವರಿಗೆ ಅಲ್ಲ. ಆದ್ರೂ ಸಚಿನ್ ತನ್ನನ್ನು ತಾನು ಏನಂತ ಅಂದುಕೊಂಡಿದ್ರು. ? ತನ್ನಲ್ಲಿ ಏನಾದ್ರು ಅಚ್ಚರಿಯ ಶಕ್ತಿ ಇದೆ ಅಂತ ಗೊತ್ತಿತ್ತಾ. ? ಹಾಗಿದ್ರೆ ಸಚಿನ್ನಲ್ಲಿರುವ ದೈವಂಶಾವಾದ್ರೂ ಏನು ? ಎಲ್ಲವೂ ಸಚಿನ್ ಅವ್ರ ಅಂತರಂಗಕ್ಕೆ ಮಾತ್ರ ಗೊತ್ತು…. ಯಾಕಂದ್ರೆ ಸಚಿನ್ ಹೆಚ್ಚು ಮಾತನಾಡೊಲ್ಲ.. ಬ್ಯಾಟ್ ಮಾತ್ರ ಪಟಪಟನೇ ಮಾತನಾಡುತ್ತೆ.. ಮೌನದಲ್ಲೆ ಸಚ್ಚು ಮುಖದಲ್ಲಿ ನಗು ಅರಳುತ್ತೆ..

ಎಲ್ರೂ ಸಚಿನ್ ಅವ್ರನ್ನ ದೇವರು ಅಂತ ಕರೆದ್ರು. ಆದ್ರೆ ಸಚಿನ್ ತನಗೂ ದೇವರಿದ್ದಾರೆ ಅಂತ ನಂಬ್ಕೊಂಡ್ರು. ಅಪ್ಪ– ಅಮ್ಮನ ಜತೆ ತನ್ನ ಗುರುವನ್ನ ದೇವರಂತೆ ಕೊಂಡಾಡಿದ್ರು. ಹೌದು.. ಗುರು ರಮಕಾಂತ್ ಆಚ್ರೆಕರ್ ಅವ್ರನ್ನ ಸಚಿನ್ ದ್ರೋಣನಂತೆ ಕಂಡ್ರು. ದ್ರೋಣನ ಪ್ರೀತಿಯ ಶಿಷ್ಯ ಅರ್ಜುನ ತಾನೇ ಅಂತ ಬಿಂಬಿಸಿಕೊಂಡ್ರು.
ಅದಕ್ಕಾಗಿಯೇ ಗುರುವಿನ ಸವಾಲುಗಳನ್ನ ಗೆದ್ದು ಪ್ರೀತಿಯ ಶಿಷ್ಯನಾದ್ರು. ಅಷ್ಟೇ ಅಲ್ಲ, ಅರ್ಜುನನಿಗೆ ಪಕ್ಷಿಯ ಕಣ್ಣು ಮಾತ್ರ ಕಂಡ್ರೆ ಸಚಿನ್ಗೆ ಕೇವಲ ಚೆಂಡುಮಾತ್ರ ಕಾಣುವಂತೆ ಮಾಡಿದ್ರು ಗುರು ಅಚ್ರೆಕರ್. ಹಾಗೇ ಪ್ರತಿ ಸರಣಿಗೂ ಮುನ್ನ ಆಚ್ರೆಕರ್ ಮನೆಗೆ ಹೋಗಿ ಆಶೀರ್ವಾದ ಪಡೆಯುತ್ತಾರೆ ತೆಂಡುಲ್ಕರ್

Sachin Tendulkar saaksha tv

ಎರಡು ಕೈಗಳಿಂದ ಬಾಣ ಬಿಡುವ ಅರ್ಜುನ ಸವ್ಯಸಾಚಿ. . ಹಾಗೇ ತೆಂಡುಲ್ಕರ್ ಕೂಡ.. ಬಲ ಮತ್ತು ಎಡಗೈನಲ್ಲಿ ಬ್ಯಾಟ್ ಬೀಸಿ ಸವ್ಯಸಾಚಿಯಾಗಿದ್ದಾರೆ. ಶಬ್ದವೇದಿ ವಿದ್ಯೆಯಂತೆ ಸಚಿನ್ ಸಹ ಕ್ರಿಕೆಟ್ಗೆ ಬೇಕಾಗಿರುವ ಕೆಲವೊಂದು ಕಲೆಗಳನ್ನ ಕರಗತ ಮಾಡ್ಕೊಂಡಿದ್ದಾರೆ.

ಹೌದು, ಸಚಿನ್ ನೆರಳಿನ ಜತೆ ಆಟವಾಡುತ್ತಿದ್ರು. ಕನ್ನಡಿ ಎದುರು ನಿಂತು ಬ್ಯಾಟಿಂಗ್ ತಾಲೀಮ್ ಮಾಡ್ತಾ ಇದ್ರು. ಒಂದಂತೂ ನಿಜ, ಕ್ರಿಕೆಟ್ ಆಟವನ್ನ ಸಿದ್ದಿಸಿಕೊಳ್ಳಬೇಕಾದ್ರೆ ಸಚಿನ್ ಏನು ಬೇಕಾದ್ರೂ ಮಾಡಲು ರೆಡಿ.. ಯಾಕಂದ್ರೆ ರಾತ್ರಿ ನಿದ್ದೆಯಲ್ಲೂ ಸಚಿನ್ ನಡೆದಾಡುತ್ತಿದ್ರು. ಕೆಲವೊಂದು ಸಲವಂತೂ ಸಚಿನ್ ನಿದ್ದೇನೇ ಮಾಡ್ತಾ ಇರಲಿಲ್ಲ. ಬೌಲರ್ಗಳ ಎಸೆತಗಳನ್ನ ಕಲ್ಪಿಸಿಕೊಂಡು ಅದಕ್ಕೆ ಹೇಗೆ ಉತ್ತರ ನೀಡಬೇಕು ಎಂಬುದನ್ನ ರಾತ್ರಿಯೆಲ್ಲಾ ಯೋಚನೆ ಮಾಡ್ತಾ ಇರುತ್ತಿದ್ರು.

ಸಚಿನ್ ತೆಂಡುಲ್ಕರ್ ಮುಗ್ದ ಮನಸ್ಸಿನ ಭಾವುಕ ಜೀವಿ.. ಮೈದಾನದಲ್ಲಿ ಬ್ಯಾಟ್ ಹಿಡಿದು ಅಬ್ಬರಿಸಿರಬಹುದು..ಆದ್ರೆ ಮೈದಾನದ ಹೊರಗಡೆ ಅಷ್ಟೇ ಸ್ನೇಹಮಯಿ.. ಅಷ್ಟೇ ಅಲ್ಲ ಮಾನವೀಯತೆಯ ಗುಣವೂ ಇದೆ. ಆದ್ರೆ ಎಲ್ಲೂ ಪ್ರಚಾರ ಬಯಸಿದವರಲ್ಲ. ತಾನಾಯ್ತು ತನ್ನ ಕೆಲಸ ಆಯ್ತು ಅಂತ ಸುಮ್ಮನಾಗಿರುತ್ತಾರೆ.
ಹೌದು, ಸಚಿನ್ ತೆಂಡುಲ್ಕರ್ ಅಪ್ನಾಲಯ ಅನಾಥಾಶ್ರಮ ಸೇರಿದಂತೆ ಹಲವಾರು ಅನಾಥಾಶ್ರಮಗಳಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ಜತೆಗೆ ಕಷ್ಟದಲ್ಲಿರುವ ತಮ್ಮ ಸ್ನೇಹಿತರನ್ನ ತೆಂಡುಲ್ಕರ್ ಮರೆತಿಲ್ಲ. ಚಿಕ್ಕ ಮಗುವಿದ್ದಾಗ ತನ್ನ ತುಂಟಾಟಗಳನ್ನ ಸಹಿಸಿಕೊಂಡು ಆರೈಕೆ ಮಾಡಿದ್ದ ಆಯಮ್ಮನಿಗೆ ಸಚಿನ್ ನೆನಪಿಸಿಕೊಳ್ಳುತ್ತಿದ್ದಾರೆ. ಹಾಗೆ ನೆರವು ಕೂಡ ನೀಡಿದ್ದಾರೆ.

ಅಂದ ಹಾಗೇ ಸಚಿನ್ ಪುಸ್ತಕಗಳನ್ನ ಓದುತ್ತಾರೆ. ಕವನಗಳನ್ನ ಬರೆಯುವ ಹವ್ಯಾಸ ಇದೆ. ಹಾಗೇ ಸಂಗೀತ ಪ್ರಿಯ.ಕೂಡ . ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಹಾಡಿರುವ ಹಾಡುಗಳಂತೂ ಅಚ್ಚುಮೆಚ್ಚು. ಜತೆಗೆ ಪಾಪ್ ಸಂಗೀತದ ಹುಚ್ಚು ಇದೆ.

ಬಿಡುವಿನ ವೇಳೆಯಲ್ಲಿ ಸಿನಿಮಾ ಕೂಡ ನೋಡ್ತಾರೆ. ಆದ್ರೆ ಅಭಿಮಾನಿಗಳ ಅಭಿಮಾನದಿಂದ ತಪ್ಪಿಸಿಕೊಳ್ಳಲು ಸಚಿನ್ ಮಾರುವೇಷ ಹಾಕೊಂಡು ಸಿನಿಮಾ ನೋಡಿದ್ದೂ ಇದೆ. ಅದ್ರಲ್ಲೂ ಮದುವೆಗೆ ಮುನ್ನ ಪ್ರೇಯಸಿಯಾಗಿದ್ದ ಅಂಜಲಿ ಜತೆ ಸಿನಿಮಾ ನೋಡಲು ಹೋಗಿದ್ದ ಸಚಿನ್ ಮಾರುವೇಷ ಹಾಕೊಂಡಿದ್ರು. ಆದ್ರೂ ತೆಂಡುಲ್ಕರ್ಗೆ ಅಭಿಮಾನಿಗಳ ಪ್ರೀತಿಯಿಂದ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.

Sachin Tendulkar saaksha tv

ಈ ನಡುವೆ, ತಾನು ಆಡಿ ಬೆಳೆದ ಶಿವಾಜಿ ಪಾರ್ಕ್ ಬಳಿ ಇರೊ ಗಣೇಶನ ಮೇಲೆ ಅಪಾರ ನಂಬಿಕೆ. ಅಭ್ಯಾಸ ನಡೆಸುತ್ತಿರುವಾಗಂತೂ ಪ್ರತಿ ದಿನ ಸಚಿನ್ ಗಣೇಶನಿಗೆ ನಮಸ್ಕಾರ ಮಾಡುತ್ತಿದ್ರು.

ಇನ್ನು, ಪವಾಡ ಪುರುಷ ಸಾಯಿಬಾಬಾ ಭಕ್ತ ಕೂಡ ಹೌದು. ಆಗಾಗ ಪುಟ್ಟಪರ್ತಿಗೆ ಹೋಗಿ ಸಾಯಿಬಾಬಾ ಅವ್ರನ್ನ ಭೇಟಿ ಮಾಡಿ ಬರ್ತಾ ಇದ್ರು. ಜತೆಗೆ ಪುಟ್ಟಪರ್ತಿಯಲ್ಲಿ ಸಚಿನ್ ಸೌಹಾರ್ಧ ಪಂದ್ಯವನ್ನ ಆಡಿದ್ರು.ಸಾಯಿಬಾಬಾ ಸಾವನ್ನಪ್ಪಿದಾಗ ಸಚಿನ್ ತನ್ನ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿರಲಿಲ್ಲ. ಅಷ್ಟೇ ಅಲ್ಲ, ಸಾಯಿಬಾಬಾ ಅವ್ರ ಅಂತಿಮ ದರ್ಶನ ಮಾಡ್ಕೊಂಡು ಬಂದಿದ್ರು. ಸಾಯಿಬಾಬಾ ಅವ್ರ ಆಗಲಿಕೆಯಿಂದ ಸಚಿನ್ ತೀವ್ರ ವಿಚಲಿತರಾಗಿದ್ರು.
ಇನ್ನು, ಸಚಿನ್ ವರ್ಷವಿಡಿಕ್ರಿಕೆಟ್ನಲ್ಲಿ ಬಿಝಿಯಾಗಿರುತ್ತಿದ್ರು. ಆದ್ರೂ ವಿರಾಮದವೇಳೆಯಲ್ಲಿ ಕುಟುಂಬದವರ ಜತೆ ಕಾಲ ಕಳೆಯುತ್ತಿರುತ್ತಾರೆ. ಹಾಗೇ ಸಚಿನ್ ತೆಂಡುಲ್ಕ ರ್ ಕಾರ್ ಪ್ರೀಯ ಕೂಡ ಹೌದು.. ಟೆನಿಸ್, ಫಾರ್ಮುಲಾ ವನ್ ರೇಸ್ ಅನ್ನು ತುಂಬಾನೇ ಇಷ್ಟ ಪಡುತ್ತಾರೆ. ಅದೂ ಅಲ್ಲದೆ ಸ್ಪೀಡ್ ಆಗಿ ಕಾರ್ ಓಡಿಸುವ ಹುಚ್ಚು ಮನಸೂ ತೆಂಡುಲ್ಕರ್ಗಿದೆ. ಏನೇ ಆಗ್ಲಿ, ತೆಂಡುಲ್ಕರ್ ತನ್ನ ವ್ಯಕ್ತಿತ್ವವನ್ನ ತಾನೇ ರೂಪಿಸಿಕೊಂಡಿದ್ದಾರೆ. ಸಣ್ಣದೊಂದು ಚುಕ್ಕೆ ಬೀಳದಂತೆ ಎಚ್ಚರ ವಹಿಸಿಕೊಂಡಿದ್ದಾರೆ.

ಸಚಿನ್ ಕ್ರಿಕೆಟ್ ಬದುಕಿನಲ್ಲಿ ಅಂದುಕೊಂಡಿದ್ದನ್ನ ಸಾಧಿಸಿ ಆಗಿದೆ.. ಯಾವುದು ಅಸಾಧ್ಯವೋ ಅದನ್ನ ಸಾಧ್ಯ ಅಂತ ಪ್ರೂವ್ ಮಾಡಿಯಾಗಿದೆ. ಮನಸ್ಸಿಗೆ ಸಾಕು ಅಂತ ಅನ್ನಿಸಿಬಿಟ್ಟಿದೆ. ಪ್ರೀತಿ ಮುನಿಸಿಕೊಳ್ತಾ ಇದೆ. ಹೃದಯ ಭಾರವಾಗಿದೆ. ಮುಖದಲ್ಲಿ ನೋವಿದ್ರೂ ಮರೆ ಮಾಚುವಂತಾಗಿದೆ. ನಡೆದು ಬಂದ ಹಾದಿಯನ್ನ ಮತ್ತೆ ಮತ್ತೆ ನೆನಪಿಸಿಕೊಳ್ಳುವಂತಾಗಿದೆ. ಎಲ್ಲವೂ ಒಂದು ಕ್ಷಣ ಯೋಚನಾ ಲಯರಿಯಲ್ಲಿದ್ದಾಗ ಕಣ್ಣಂಚಿನಲ್ಲಿ ನೀರು ..
ಅಬ್ಬಾ… ಅದು 24 ವರ್ಷಗಳ ಸುದೀರ್ಘ ಪಯಣ…. ಅಲ್ಲಿ ಸಾಕಷ್ಟು ಏಳುಬೀಳುಗಳಿವೆ. ಸೋಲು – ಗೆಲುವುಗಳೂ ಇವೆ… ಹಾಗೇ, ಅಂಗಣದಲ್ಲಿ ಜಟಾಪಟಿಯೂ ನಡೆದಿದೆ… ಕಿರಿಕ್ಕೂ ನಡೆದಿದೆ…. ಮೋಸದಾಟವೂ ನಡೆದಿದೆ…ಕೋತಿಯಾಟವೂ ನಡೆದಿದೆ. ಆದ್ರೂ ಸಚಿನ್ ಹೆಸರಿಗೆ ಎಲ್ಲೂ ಕಪ್ಪುಚುಕ್ಕೆ ಬಿದ್ದಿಲ್ಲ.

Sachin Tendulkar saaksha tv

ನಿಜ, ಸಚಿನ್ ತೆಂಡುಲ್ಕರ್ ಕಂಪ್ಲೀಟ್ ಆ್ಯಂಡ್ ಫರ್ಪೆಕ್ಸ್.. ಆದ್ರೂ ಸಚಿನ್ ಸ್ವಾರ್ಥಿ ಅಂತ ಹೇಳ್ತಾರೆ.. ಆದ್ರೆ ಈ ಜಗತ್ತಿನಲ್ಲಿ ಎಲ್ರೂ ಸ್ವಾರ್ಥಿಗಳೇ.. ಯಾರು ತ್ಯಾಗಿಗಳಲ್ಲ.. ದೇವಾನುದೇವತೆಗಳೇ ತಮ್ಮ ಉಳಿವಿಗಾಗಿ, ಸ್ವಾರ್ಥಿಗಳಾಗಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಅಂದ ಮೇಲೆ ಸಚಿನ್ ಶತಕಕ್ಕಾಗಿ ಆಡಲಿ, ದಾಖಲೆಗಳಿಗಾಗಿಯೇ ಆಡಲಿ.. ದುಡ್ಡಿಗಾಗಿಯೇ ಆಡಲಿ… ಅದನ್ನ ಕೇಳುವ — ಹೇಳುವ ರೈಟ್ಸ್ ನಮಗಿಲ್ಲ.. ಯಾಕಂದ್ರೆ ಸಚಿನ್ ಆಡಿದ್ದು ದೇಶಕ್ಕಾಗಿ.. ಕ್ರಿಕೆಟ್ನ ಉನ್ನತಿಗಾಗಿ

ಒಂದಂತೂ ಸತ್ಯ, ಕ್ರಿಕೆಟ್ ಬ್ರಹ್ಮಾಂಡವೇ ವಾಮನ ಮೂರ್ತಿಯ ಕೈಯಲ್ಲಿದೆ. ಬ್ಯಾಟ್ ಎಂಬ ಅಸ್ತ್ರದಲ್ಲಿ, ರನ್ ಅನ್ನೋ ಮಳೆಯನ್ನೇ ಸುರಿಸಿದ್ರು. ಅಭಿಮಾನಿಗಳಿಗೆ ಪ್ರೀತಿಯ ದೇವರಾದ್ರು. ಜಾಹೀರಾತುದಾರರಿಗೆ ಕೋಹಿನೂರ್ ವಜ್ರವಾದ್ರು. ಭಾರತೀಯ ಕ್ರಿಕೆಟ್ಗೆ ರತ್ನವಾದ್ರು. ವಿಶ್ವ ಕ್ರಿಕೆಟ್ಗೆ ಸಾರ್ವಭೌಮರಾದ್ರು. ಯುವ ಆಟಗಾರರಿಗೆ ಸ್ಪೂರ್ತಿಯ ಚಿಲುಮೆಯಾದ್ರು. ಮೂರ್ಖರ ಆಟ ಅನ್ನೋ ಹಣೆಪಟ್ಟಿ ಹೊಂದಿದ್ದ ಕ್ರಿಕೆಟ್ ಆಟವನ್ನ ಶ್ರೀಮಂತಗೊಳಿಸಿದ್ರು.

ಇದೀಗ, ವಯಸ್ಸು ಮಾಗಿದೆ.. ತಪ್ತ ಮನಸ್ಸಿನ ತಪಸ್ಸಿಗೆ ಫಲ ಸಿಕ್ಕಿದೆ. ಕನಸು ನನಸಾಗಿದೆ.. . ಬದುಕು ನೆಮ್ಮದಿಯಾಗಿದೆ. ಸುರಿಸಿದ ಬೆವರಿನ ಹನಿಗಳಿಗೆ ಸಮಾಧಾನ ಸಿಕ್ಕಿದೆ…ಮನಸ್ಸಿಗೆ ತೃಪ್ತಿಯಾಗಿದೆ. ಶಿಸ್ತು, ಸ್ಥಿರತೆ ಬದ್ಧತೆ ಅರ್ಥಪೂರ್ಣವಾಗಿದೆ. ಉಸಿರು ಅಂತ ನಂಬಿಕೊಟ್ಟಿದ್ದ ಕ್ರಿಕೆಟ್ ಖುಷಿ ಕೊಟ್ಟಿದೆ. ಅಭಿಮಾನಿಗಳ ಚಿತ್ತಾರ ಮುದ ನೀಡಿದೆ.. ಸಿಂಹಾವಲೋಕನದ ಹಾದಿ ಸಾರ್ಥಕತೆಯನ್ನ ಕಲ್ಪಿಸಿದೆ. ಇದಕ್ಕಿಂತ ಇನ್ನೇನೂ ಬೇಕು ಅಲ್ವಾ .. ಅದಕ್ಕಾಗಿಯೇ ಸಚಿನ್ ಮೈದಾನದಿಂದ ದೂರ ಸರಿಯುತ್ತಿದ್ದಾರೆ.

Sachin Tendulkar saaksha tv

ಇನ್ನು, ವಿದಾಯದ ವೇಳೇಯಲ್ಲಿ ಆಗುವ ನೋವು, ಬೇಸರ ಅಷ್ಟಿಷ್ಟಲ್ಲ. ತನ್ನ ಕಣ್ಣೇದುರೇ ನೂರಾರು ಆಟಗಾರರು ಬ್ಯಾಟ್ – ಪ್ಯಾಡ್ ಕಳಚಿದ್ದಾರೆ. ಯುವ ಆಟಗಾರರು ಬಂದು ಹೋಗಿದ್ದಾರೆ.. ಇನ್ನು ಕೆಲವರು ಮಿಂಚು ಹರಿಸ್ತಾ ಇದ್ದಾರೆ. ತನ್ನ ಹಾದಿಯಲ್ಲೇ ಸಾಗಬೇಕು ಅನ್ನೋ ಪ್ರಯತ್ನದಲ್ಲಿದ್ದಾರೆ. ಆದ್ರೂ ಸಚಿನ್ ಯಾವತ್ತೂ ತನ್ನ ವಿದಾಯದ ಬಗ್ಗೆ ಯೋಚಿಸಿಲ್ಲ… ಆದ್ರೆ ಒಂದಲ್ಲ ಒಂದು ದಿನ ಕ್ರಿಕೆಟ್ಗೆ ವಿದಾಯ ಹೇಳಲೇಬೇಕಿತ್ತು. ಆ ದಿನ ಈಗ ಬಂದುಬಿಟ್ಟಿದೆ..
ಇದೀಗ ಸಚಿನ್ಗೆ ಒಂದೊಂದು ಕ್ಷಣವೂ ಅಮೂಲ್ಯ…ಸರಿಯಾಗಿ 24 ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದಾಗ ತೆಂಡುಲ್ಕರ್ ಚಡಪಡಿಸುತ್ತಿದ್ರು ಯಾವಾಗ ಟೀಮ್ ಇಂಡಿಯಾದ ಜೆರ್ಸಿ ಮತ್ತು ಕ್ಯಾಪ್ ಧರಿಸ್ತೇನೆ ಅನ್ನೋ ತವಕದಲ್ಲಿದ್ರು. ಹಾಗೇ ಈಗಲೂ ಅದೇ ರೀತಿಯ ಚಡಪಡಿಕೆ ಇದೆ. ಆದ್ರೆ ಟೀಮ್ ಇಂಡಿಯಾದ ಜೆರ್ಸಿ ಮತ್ತು ಕ್ಯಾಪ್ ಕೆಳಗಿಡಬೇಕಲ್ವಾ ಅನ್ನೋ ವೇದನೆ ಸಚಿನ್ ಅವ್ರನ್ನ ಪ್ರತಿಕ್ಷಣವೂ ಕಾಡ್ತಾ ಇದೆ.

ಒಟ್ಟಾರೆ ಸಚಿನ್ಗೆ ಸಿಕ್ಕಿದೆ ಅಭಿಮಾನಿಗಳಿಂದ ಅಭಿಮಾನದ ಆರತಿ.. . ಯುವ ಕ್ರಿಕೆಟಿಗರಿಗಾಯ್ತು ಸ್ಪೂರ್ತಿ…. ವಿಶ್ವದೆಲ್ಲೆಡೆ ಪಸರಿಸಿತ್ತು ಭಾರತದ ಕೀರ್ತಿ.. ವಿಶ್ವ ಕ್ರಿಕೆಟಿಗಾಯ್ತು ಉನ್ನತ್ತಿ… ದಾಖಲೆಗಳ ಒಡೆಯನಾದ್ರೂ ವಾಮನಮೂರ್ತಿ … ಸದಾ ನೆನಪದಲ್ಲಿದೆ ಇನ್ನೂ ಗುರು ಹಿರಿಯ ಮೇಲಿನ ಭಕ್ತಿ. ಆದ್ರೂ ಇದೀಗ ಸಚಿನ್ಗೆ , ಬಿಟ್ರು ಬೀಡದೇ ಕಾಡುತ್ತಿದೆ ಕ್ರಿಕೆಟ್ ಪ್ರೀತಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd