ವಿಶ್ವ ಬ್ಯಾಡ್ಮಿಂಟನ್ ಫೆಡರೇಶ್ ನಿಗದಿ ಪಡಿಸಿರುವ ಹೊಸ ವೇಳಾಪಟ್ಟಿಗೆ ಸೈನಾ ನೆಹ್ವಾಲ್ ಅಸಮಾಧನ ವ್ಯಕ್ತಪಡಿಸಿದ್ದಾರೆ. ಸೈನಾ ನೆಹ್ವಾಲ್ ಅವರ ಅಸಮಾಧನದ ಧ್ವನಿಗೆ ಅವರ ಪತಿ ಹಾಗೂ ಬ್ಯಾಡ್ಮಿಂಟನ್ ಆಟಗಾರ ಪಿ. ಕಶ್ಯಪ್, ಮತ್ತು ಭರವಸೆಯ ಮತ್ತೊಬ್ಬ ಆಟಗಾರ ಪ್ರಣೀತ್ ಕೂಡ ಬೆಂಬಲ ನೀಡಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ನ ಈ ನಿರ್ಧಾರ ಮೂರ್ಖತನದ್ದು. ಹೊಸ ವೇಳಾಪಟ್ಟಿಯಿಂದ ಆಟಗಾರರು ಗಾಯ ಮತ್ತು ಸ್ನಾಯು ಸೆಳೆತಕ್ಕೊಳಗಾಗುವ ಸಾಧ್ಯತೆಗಳಿವೆ. 5 ತಿಂಗಳುಗಳಲ್ಲಿ 22 ಟೂರ್ನಿಗಳು ಆಡುವುದು ಅಂದ್ರೆ ಅದು ತಮಾಷೆಯಲ್ಲ ಎಂದು ಹೇಳಿದ್ದಾರೆ.
ಕೊರೋನಾ ವೈರಸ್ ನಿಂದ ಕಳೆದ ಮೂರು ತಿಂಗಳುಗಳಿಂದ ನಡೆಯಬೇಕಿದ್ದ ಟೂರ್ನಿಗಳು ರದ್ದುಗೊಂಡಿವೆ. ಈ ಹಿನ್ನಲೆಯಲ್ಲಿ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ಆಗಸ್ಟ್ ನಿಂದ ಬ್ಯಾಡ್ಮಿಂಟನ್ ಟೂರ್ನಿಗಳನ್ನು ಸಂಘಟಿಸುವ ಹೊಸದಾಗಿ ವೇಳಾಪಟ್ಟಿಯನ್ನು ಬಿಡುಗಡೆಯನ್ನು ಮಾಡಿತ್ತು. ಕೇವಲ ಐದು ತಿಂಗಳುಗಳಲ್ಲಿ 22 ಟೂರ್ನಿಗಳನ್ನು ಆಡುವುದು ತುಂಬಾ ಕಠಿಣವಾದದ್ದು. ಅದೂ ಅಲ್ಲದೆ ಕೋವಿಡ್-19 ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪಷ್ಟವಾದ ಮಾರ್ಗಸೂಚಿಗಳು ಇನ್ನೂ ಬಂದಿಲ್ಲ. ಹಾಗೇ ಕ್ವಾರಂಟೈನ್ ಬಗ್ಗೆಯೂ ಮಾಹಿತಿ ಇಲ್ಲ. ಖಂಡಿತವಾಗಿಯೂ ನಮಗೆಲ್ಲಾ ಮತ್ತೆ ಆಡಬೇಕು ಎಂಬ ಮನಸ್ಸಿದೆ. ಆದ್ರೆ ಈ ಬಗ್ಗೆ ಸಾಕಷ್ಟು ಪ್ರಶ್ನೆಗಳು, ಸವಾಲುಗಳು ನಮ್ಮ ಮುಂದಿವೆ. ಈ ನಡುವೆ ನಾವು ಅಭ್ಯಾಸವನ್ನು ಇನ್ನೂ ಶುರು ಮಾಡಿಲ್ಲ ಎಂದು ಪಿ. ಕಶ್ಯಪ್ ಹೇಳಿದ್ದಾರೆ.
ಆಗಸ್ಟ್ ನಿಂದ ಡಿಸೆಂಬರ್ ತನಕ 22 ಟೂರ್ನಿಗಳು…. ಐದು ತಿಂಗಳು ಬಿಡುವಿಲ್ಲದ ಪ್ರಯಾಣ. ಈ ನಡುವೆ ಅಂತಾರಾಷ್ಟ್ರೀಯ ಮಟ್ಟದ ಮಾರ್ಗಸೂಚಿ ಏನು ಹೇಳುತ್ತದೆ ಎಂದು ಸೈನಾ ನೆಹ್ವಾಲ್ ಪ್ರಶ್ನೆ ಮಾಡಿದ್ದಾರೆ. ಬಿಡಬ್ಲ್ಯುಎಫ್‍ನ ನಿರ್ಧಾರದ ಬಗ್ಗೆ ಸೈನಾ ನೆಹ್ವಾಲ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೊರೋನಾ ವೈರಸ್ ಆತಂಕದಿಂದ ಟೆನಿಸ್ ಸೇರಿದಂತೆ ಇತರೆ ಕ್ರೀಡೆಗಳ ಕ್ರೀಡಾ ಸಂಸ್ಥೆಗಳು ಏನನ್ನು ಹೇಳುತ್ತಿಲ್ಲ. ಅದ್ರಲ್ಲೂ ಟೆನಿಸ್ ಮುಂದಿನ ಅಕ್ಟೋಬರ್ ತನಕ ಯಾವುದೇ ಪ್ಲಾನ್ ಹಾಕಿಕೊಂಡಿಲ್ಲ ಅಂತ ಹೇಳಿದ್ದಾರೆ.
ಅದೇ ರೀತಿ ಪ್ರಣೀತ್ ಕೂಡ ಬಿಡಬ್ಲ್ಯುಎಫ್ ನಿರ್ಧಾರದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಇದೊಂದು ಮೂರ್ಖತನದ ನಿರ್ಧಾರವಾಗಿದೆ. ಐದು ತಿಂಗಳುಗಳಲ್ಲಿ 22 ಟೂರ್ನಿಗಳು…. ಇವರು ಆಟಗಾರರ ಬಗ್ಗೆ ಒಂಚೂರು ಯೋಚನೆ ಮಾಡಿಲ್ಲ. ಬಿಡಬ್ಲ್ಯುಎಫ್ ಅಧ್ಯಕ್ಷರು ಕೂಡ ಮಾಜಿ ಒಲಿಂಪಿಕ್ ಚಾಂಪಿಯನ್. ಪ್ರತಿ ವಾರ ಒಂದೊಂದು ಟೂರ್ನಿಯನ್ನು ಹೇಗೆ ಆಡುವುದು ಎಂಬುದರ ಬಗ್ಗೆ ಯೋಚನೆ ಮಾಡಬೇಕಿತ್ತು. ಫಿಟ್ ಆಗಿರುವ ಆಟಗಾರ ಕೂಡ ಈ ವೇಳಾಪಟ್ಟಿಯಂತೆ ಆಡುವುದು ಕಷ್ಟ. ಹೀಗಾಗಿ ಆಟಗಾರರು ಗಾಯಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ನಾನು ಬಿಡಬ್ಲ್ಯುಎಫ್ ನಿಂದ ಇಂತಹ ನಿರ್ಧಾರವನ್ನು ನಿರೀಕ್ಷೆ ಮಾಡಿರಲಿಲ್ಲ ಅಂತ ಪ್ರಣೀತ್ ಹೇಳಿದ್ದಾರೆ.
ಮತ್ತೊಂದೆಡೆ ಚಿರಾಗ್ ಶೆಟ್ಟಿ ಕೂಡ ಬಿಡಬ್ಲ್ಯುಎಫ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಡಬ್ಲ್ಯುಎಫ್ ವೇಳಾಪಟ್ಟಿಯನ್ನು ನೋಡಿದಾಗ ನನಗೆ ಅಚ್ಚರಿಯಾಗಿತ್ತು. ಐದು ತಿಂಗಳಲ್ಲಿ 22 ಟೂರ್ನಿಗಳು… ಅದ್ರಲ್ಲಿ ಸೆಪ್ಟಂಬರ್ ನಿಂದ ಡಿಸೆಂಬರ್ ತನಕ ಒಂದು ವಾರವೂ ಬಿಡುವಿಲ್ಲ. ಪ್ರತಿ ವಾರವೂ ನಾವು ಒಂದೊಂದು ಟೂರ್ನಿಯನ್ನು ಆಡಬೇಕು. ಇದು ಮೂರ್ಖತನದ ನಿರ್ಧಾರ ಅಂತ ಅಂದಿದ್ದಾರೆ.
ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರರು ಹೈದ್ರಬಾದ್ ನಲ್ಲಿ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತು ಪಡೆಯುತ್ತಿದ್ದಾರೆ. ಬಿಡಬ್ಲ್ಯುಎಫ್ ನಿರ್ಧಾರ ಬಗ್ಗೆ ಪುಲ್ಲೇಲ ಗೋಪಿಚಂದ್ ಹೇಳೋದು ಹೀಗೆ… ನಾವು ಇನ್ನೂ ಮೇ 31ರವರೆಗೆ ಕಾಯಬೇಕು. ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನವನ್ನು ಪಾಲಿಸಬೇಕು. ತೆಲಂಗಾನ ಸರ್ಕಾರ ಮೇ 31ರವರೆಗೆ ಲಾಕ್ ಡೌನ್ ಅನ್ನು ಮುಂದೂಡಿದೆ. ಯಾವುದೇ ಕ್ರೀಡಾಂಗಣದಲ್ಲಿ ಕ್ರೀಡಾಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಕೊರೋನಾ ವೈರಸ್ ನ ಅಟ್ಟಹಾಸ ಕಡಿಮೆಯಾಗುವ ತನಕ ಯಾವುದೇ ಕ್ರೀಡಾ ಚಟುವಟಿಕೆಗಳು ಕೂಡ ನಡೆಯುವುದಿಲ್ಲ. ಇದು ಎಷ್ಟು ದಿನ ಅಂತ ಹೇಳಲು ಸಾಧ್ಯವೇ ಇಲ್ಲ.








