ಯಶ್ವಂತ್ ಕುಮಾರ್ ಮತ್ತು ಮಂದಾರ ಬತ್ತಲಹಳ್ಳಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ, ಸಚಿನ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಸಮುದ್ರ ಮಂಥನ’ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಸ್ಕಂದ ಅಶೋಕ್ ನಟಿಸುತ್ತಿದ್ದಾರೆ. ‘ಯೂ ಟರ್ನ್’, ‘ಚಾರುಲತಾ’ ಚಿತ್ರಗಳಲ್ಲಿ ನಟಿಸಿದ್ದ ಸ್ಕಂದ ಅಶೋಕ್, ಇಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
“ಸಮುದ್ರ ಮಂಥನ ಚಿತ್ರದ ಕಥೆ ಮತ್ತು ಈ ಪಾತ್ರಕ್ಕಿರುವ ಮಹತ್ವ ನೋಡಿ ಬಹಳ ಇಷ್ಟಪಟ್ಟು ಒಪ್ಪಿಕೊಂಡೆ. ನಿಜ ಜೀವನದಲ್ಲಿ ನಾನು ಕಾನೂನಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮಾತ್ರವಲ್ಲದೆ, ಸಂಚಾರ ನಿಯಮಗಳನ್ನು ಉಲ್ಲಂಘಿಸಬಾರದೆಂಬ ಜನಜಾಗೃತಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದೆ. ಅಂಥ ನಾನು ‘ಯೂ ಟರ್ನ್’ ಚಿತ್ರದಲ್ಲಿ ಅದಕ್ಕೆ ತದ್ವಿರುದ್ಧವಾದ ಪಾತ್ರ ಮಾಡಿದ್ದೆ! ಆದರೆ ಈ ಚಿತ್ರದಲ್ಲಿ ಕಾನೂನಿನ ಮೇಲೆ ಅಪಾರ ಗೌರವವಿಟ್ಟುಕೊಂಡು ಕರ್ತವ್ಯ ನಿರ್ವಹಿಸುವ ನಿಷ್ಠಾವಂತ ಪೊಲೀಸ್ ಅಧಿಕಾರಿಯ ಪಾತ್ರ ನನ್ನ ನಿಜ ಜೀವನಕ್ಕೆ ಬಹಳ ಹತ್ತಿರವೆನಿಸಿತು. ‘ಸಮುದ್ರ ಮಂಥನ’ದಲ್ಲಿನ ‘ಶಿವು’ ಪಾತ್ರ ಯೋಚಿಸುವ ಮತ್ತು ಬದುಕನ್ನು ನೋಡುವ ರೀತಿಗೂ, ನನ್ನ ಯೋಚನಾಲಹರಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಇದು ಪಾತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿಭಾಯಿಸಲು ಪೂರಕವಾಯಿತು. ಜೊತೆಗೆ ಈ ಚಿತ್ರತಂಡದ ಬದ್ಧತೆ ಹಾಗೂ ಪರಿಶ್ರಮ ನನಗೆ ಇಷ್ಟವಾಯಿತು. ಈ ಎಲ್ಲ ಕಾರಣಗಳಿಂದ ನಾನು ಈ ಚಿತ್ರತಂಡದ ಭಾಗವಾದೆ” ಎನ್ನುತ್ತಾರೆ ಸ್ಕಂದ ಅಶೋಕ್.
ಇನ್ನು ‘ಸು ಫ್ರಮ್ ಸೋ’ ಖ್ಯಾತಿಯ ಶಿವಪ್ರಕಾಶ್ ಪೂಂಜಾ, ತುಳು ಚಿತ್ರರಂಗದ ಹೆಸರಾಂತ ಕಲಾವಿದ ರಮೇಶ್ ರೈ ಸೇರಿದಂತೆ ಗುರುರಾಜ್ ಶೆಟ್ಟಿ, ಶ್ರೀಕಾಂತ್, ನವೀನ್ ಶೆಟ್ಟಿ ಮುಂತಾದವರು ‘ಸಮುದ್ರ ಮಂಥನ’ದ ತಾರಾಗಣದಲ್ಲಿದ್ದಾರೆ.








