ಆರ್ ಜೆ ರಚನಾ ಅವರ ವ್ಯಕ್ತಿತ್ವವನ್ನು ಸ್ಮರಿಸಿಕೊಂಡ ಸ್ಯಾಂಡಲ್ ವುಡ್ ನಟ, ನಟಿಯರು – Saaksha Tv
ಖ್ಯಾತ ರೇಡಿಯೋ ನಿರುಪಕಿ ಆರ್ . ಜೆ ರಚನಾ ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಇವರು ತಮ್ಮ ಮಾತಿನ ಮೂಲಕವೇ ಕೋಟ್ಯಾಂತರ ಕೇಳುಗರನ್ನು ಮಂತ್ರಮುಗ್ದರಾಗಿಸಿದ್ದರು. ಇವರು ಆರ್. ಜೆ ಮಾತ್ರ ಆಗದೆ ಚಲನಚಿತ್ರದಲ್ಲು ಕಾಣಿಸಿಕೊಂಡಿದ್ದರು. ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಮುಖಾಂತರ ಮತ್ತಷ್ಟು ಪ್ರಖ್ಯಾತಿ ಪಡೆದಿದ್ದರು.
ಇವರ ಅಗಲಿಕೆ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ. ಅಲ್ಲದೇ ಇವರಿಗೆ ಅನೇಕ ಸೆಲೆಬ್ರಿಟಿಗಳ ಜೊತೆಗೆ ಒಡನಾಟ ಇತ್ತು. ಅವರೆಲ್ಲರೂ ಈಗ ರಚನಾ ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ. ವ್ಯಕ್ತಿತ್ವ ಹೇಗಿತ್ತು ಎಂಬುದನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.
ಸ್ಯಾಂಡಲ್ವುಡ್ ನಿರ್ದೇಶಕ ಮಯೂರ ರಾಘವೇಂದ್ರ, ನಟಿ ಹರ್ಷಿಕಾ ಪೂಣಚ್ಚ ಆರ್.ಜೆ. ರಾಜೇಶ್ ಸೇರಿದಂತೆ ಅನೇಕರು ರಚನಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ರೇಡಿಯೋ ಜಾಕಿ ಆಗಿ ಕೆಲಸ ಮಾಡಿದ್ದ ರಚನಾ ಅವರು ಹಲವು ಸೆಲೆಬ್ರಿಟಿಗಳ ಸಂದರ್ಶನ ಮಾಡಿದ್ದರು. ಸಿನಿಮಾಗಳಲ್ಲಿ ನಟಿಸುವ ಮೂಲಕ ಚಿತ್ರರಂಗದವರ ಜೊತೆ ಸ್ನೇಹ ಹೊಂದಿದ್ದರು.
https://www.instagram.com/tv/CaSXIOQjEF3/?utm_source=ig_web_copy_link
ರಚನಾ ಜೊತೆಗಿನ ಫೋಟೋವನ್ನು ಆರ್ಜೆ, ಸಿನಿಮಾ ನಿರ್ದೇಶಕ ಮಯೂರ ರಾಘವೇಂದ್ರ ಅವರು ಪೋಸ್ಟ್ ಮಾಡಿಕೊಂಡಿದ್ದಾರೆ. ‘5 ವರ್ಷಗಳ ಹಿಂದೆ ನಮ್ಮಿಬ್ಬರ ಮಾತುಕತೆ ಆಗಿತ್ತು. ರೇಡಿಯೋ ಕೆಲಸದಿಂದ ನಾನು ಹೊರಬಂದಾಗ ‘ನಮ್ಮ ಕ್ಲಬ್ಗೆ ಸ್ವಾಗತ. ಶೀಘ್ರದಲ್ಲೇ ಭೇಟಿ ಆಗೋಣ’ ಅಂತ ಮಾತಾಡಿದ್ವಿ. ಇಂದು ಅವರ ಮನೆಯಿಂದ ಹೊರಬರುತ್ತಿರುವಾಗ ಎಲ್ಲ ನೆನಪುಗಳ ಬಗ್ಗೆ ಯೋಚಿಸುತ್ತ ನಾನು ಶಾಕ್ನಲ್ಲಿದ್ದೇನೆ. ನಾನು ಅವರ ಕಾರ್ಯಕ್ರಮಗಳ ಕೇಳುಗನಾಗಿದ್ದೆ. ನಂತರ ನಾನೂ ಕೂಡ ರೇಡಿಯೋ ಸೇರಿಕೊಂಡೆ. ಕಾರ್ಯಕ್ರಮಗಳ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ನಡುವೆ ಆರೋಗ್ಯಕರವಾದ ಸ್ಪರ್ಧೆ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಾವು ಉತ್ತಮ ಸ್ನೇಹಿತರಾಗಿದ್ದೆವು. ನಮ್ಮ ಕಾಲದಲ್ಲಿ ಅವರು ಉದಯೋನ್ಮುಖ ಆರ್ಜೆ ಆಗಿದ್ದರು. ಪತ್ರಿಕೆ ಜಾಹೀರಾತು, ಹೋರ್ಡಿಂಗ್ಸ್, ಸಿನಿಮಾ, ರೇಡಿಯೋ ಹೀಗೆ ಎಲ್ಲ ಕಡೆಗಳಲ್ಲೂ ಅವರೇ ಇರುತ್ತಿದ್ದರು. ಅದು ಅವರ ಎನರ್ಜಿ ಮತ್ತು ಚಾರ್ಮ್ ಆಗಿತ್ತು. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ. ರಚನಾ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಮಯೂರ ರಾಘವೇಂದ್ರ ಬರೆದುಕೊಂಡಿದ್ದಾರೆ.
‘ರೇ’ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ನಟಿ ಹರ್ಷಿಕಾ ಪೂಣಚ್ಚ ಅವರು ರಚನಾ ಅವರನ್ನು ಭೇಟಿ ಆಗಿದ್ದರು. ಆ ನೆನಪುಗಳನ್ನು ಹರ್ಷಿಕಾ ಮೆಲುಕು ಹಾಕಿದ್ದಾರೆ. ‘ನೀವು ಇಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಕೋಟ್ಯಂತರ ಜನರನ್ನು ರೇಡಿಯೋ ಮೂಲಕ ರಂಜಿಸಿದ ನಿಮ್ಮ ಸುಮಧುರವಾದ ಧ್ವನಿ ಮತ್ತು ಸುಂದರ ನಗುವನ್ನು ಮಿಸ್ ಮಾಡಿಕೊಳ್ಳುತ್ತೇನೆ. ‘ರೇ’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಾನು ಮತ್ತು ರಮೇಶ್ ಅರವಿಂದ್ ಅವರು ಆರ್ಜೆಗಳ ಜೊತೆಯಲ್ಲಿ ಕಳೆದ ಆ ಖುಷಿಯ ಕ್ಷಣ ನನಗೆ ಈಗಲೂ ನೆನಪಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಡಾರ್ಲಿಂಗ್. ಓಂ ಶಾಂತಿ’ ಎಂದು ಹರ್ಷಿಕಾ ಪೋಸ್ಟ್ ಮಾಡಿದ್ದಾರೆ. ಹಳೆಯ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.








