ಸ್ಯಾಂಡಲ್ ವುಡ್ ಚೆಲುವೆ ಹರಿಪ್ರಿಯಾಗೆ ಒಲಿದ ಹಾಲಿವುಡ್ ಪ್ರಶಸ್ತಿ
ಬೆಂಗಳೂರು: ಸ್ಯಾಂಡಲ್‍ವುಡ್ ಗ್ಲಾಮರಸ್ ಬ್ಯೂಟಿ ಹರಿಪ್ರಯಾಗೆ ಶ್ರೇಷ್ಠನಟಿ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ಕನ್ನಡದ ಮತ್ತೊಂದು ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಈ ಮೊದಲು ಅಮೃತಮತಿ ಚಿತ್ರ ಅಟ್ಲಾಂಟ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶ್ರೇಷ್ಠ ವಿದೇಶಿ ಭಾಷೆಯ ಚಿತ್ರವೆಂಬ ಪ್ರಶಸ್ತಿ ಗಳಿಸಿತ್ತು.
ಲಾಸ್ ಏಂಜಲೀಸ್ ಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶ್ರೇಷ್ಠ ಚಿತ್ರ ಮತ್ತು ಬರಗೂರರಿಗೆ ಶ್ರೇಷ್ಠ ಚಿತ್ರಕತೆ ಪ್ರಶಸ್ತಿ ಲಭಿಸಿತ್ತು. ಇದೀಗ ಈ ಚಿತ್ರಕ್ಕೆ ಮತ್ತೊಂದು ಪ್ರಶಸ್ತಿ ಸಿಕ್ಕಿದೆ. ಇಲ್ಲಿವರಗೆ ಈ ಚಿತ್ರವು ಹತ್ತಕ್ಕೂ ಹೆಚ್ಚು ಅಂತರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನ ಕಂಡಿದೆ. ಕನ್ನಡದ ಪ್ರಾಚೀನ ಕೃತಿಯಾದ ಯಶೋಧರ ಚರಿತೆಯ ಪ್ರಸಂಗವನ್ನು ಆಧರಿಸಿ ಅಮೃತಮತಿ ಚಿತ್ರ ಸಿದ್ಧವಾಗಿದೆ. ಬರಗೂರು ಅವರ ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ. ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ.
ಯಶೋಧರನ ಪಾತ್ರದಲ್ಲಿ ನಟ ಕಿಶೋರ್ ಅಭಿನಯಿಸಿದ್ದಾರೆ. ಸುಂದರರಾಜ್, ಪ್ರಮೀಳಾ ಜೋಷಾಯ್ ತಿಲಕ್, ಸುಪ್ರಿಯಾರಾವ್, ವತ್ಸಲಾಮೋಹನ್, ಅಂಬರೀಷ್ ಸಾರಂಗಿ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ಶೀಘ್ರವೇ ಈ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ನಟಿ ಹರಿಪ್ರಿಯಾ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಸತೀಶ್ ನೀನಾಸಂ ನಟನೆಯ ಪೆಟ್ರೋಮ್ಯಾಕ್ಸ್ ಚಿತ್ರಕ್ಕೆ ಹರಿಪ್ರಿಯಾ ನಾಯಕಿ. ಬೆಲ್ ಬಾಟಂ 2 ಸೇರಿ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.







