‘ತುರ್ತು ನಿರ್ಗಮನ’ ಸಿನಿಮಾದಿಂದ ಅಪ್ಪುಗೆ ಗಾನ ನಮನ…ಹೇಗಿದೆ ‘ಜೀವ’ ಹಾಡು ಕೇಳಿ ಈಗ?
ಕನ್ನಡದ ರಾಜರತ್ನ…ಅಭಿಮಾನಿಗಳ ಪಾಲಿನ ಯುವರತ್ನ ಪುನೀತ್ ರಾಜ್ ಕುಮಾರ್ ಅವರಿಗೆ ತುರ್ತು ನಿರ್ಗಮನ ಸಿನಿಮಾ ತಂಡ ಗಾನ ನಮನ ಸಲ್ಲಿಸಿದೆ. ಅಪ್ಪು ಗುಣಗಾನ ಮಾಡುವ ಜೀವ ಎಂಬ ಗೀತೆಯನ್ನು ಅನಾವಣ ಮಾಡಿದೆ.
ಶರತ್ ಭಗವಾನ್ ಬರೆದಿರುವ ಅರ್ಥಪೂರ್ಣ ಸಾಹಿತ್ಯಕ್ಕೆ, ಡಾಸ್ ಮೂಡ್ ಅಷ್ಟೇ ಸೊಗಸಾದ ಸಂಗೀತ ಸ್ಪರ್ಶ ಕೊಟ್ಟಿದ್ದು, 16 ಜನ ಖ್ಯಾತ ಹಿನ್ನೆಲೆ ಗಾಯಕರು ಧ್ವನಿಯಾಗಿದ್ದಾರೆ. ವಿಶೇಷ ಅಂದ್ರೆ ಈ ಹಾಡಿನಲ್ಲಿ ಅಪ್ಪು ಫೋಟೋ-ವಿಷ್ಯುವಲ್ಸ್ ಬಳಸಿಕೊಳ್ಳದೇ ಚೇತನ್ ಎಸ್ ಮೂರ್ತಿ, ರಕ್ಷಿತ್ ಬಿ ಕೈಚಳಕದಿಂದ ಸೃಷ್ಟಿಸಿರುವ ಸ್ಕೆಚ್ ಗಳನ್ನು ಬಳಸಲಾಗಿದೆ.
ಅಂದಹಾಗೇ ಲಾಂಗ್ ಗ್ಯಾಪ್ ಬಳಿಕ ನಟ ಕಂ ಗಾಯಕ ಸುನಿಲ್ ರಾವ್ ತುರ್ತು ನಿರ್ಗಮನ ಸಿನಿಮಾ ಮೂಲಕ ಕಂಬ್ಯಾಕ್ ಮಾಡ್ತಿದ್ದು, ಇದೊಂದು ಕುತೂಹಲ ಹುಟ್ಟಿಸುವ ಫ್ಯಾಂಟಸಿ ಸಿನಿಮಾ.
ಕುಮಾರ್ ಆ್ಯಂಡ್ ಕುಮಾರ್ ಫಿಲ್ಮ್ಸ್ ಸಂಸ್ಥೆಯಡಿ ಭರತ್‌ಕುಮಾರ್ ಮತ್ತು ಹೇಮಂತ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದು, ಶೈಲಜಾ ಪಿಕ್ಚರ್ಸ್ ನ ಸಹ ನಿರ್ಮಾಪಕ ಶರತ್ ಭಗವಾನ್ ಸಹಯೋಗವಿದೆ. ಹೇಮಂತ್ ಕುಮಾರ್ ನಿರ್ಮಾಣಕ್ಕೆ ಕೈಜೋಡಿಸುವುದರೊಂದಿಗೆ ಈ ಚಿತ್ರದ ನಿರ್ದೇಶನ ಕೂಡ ಮಾಡುತ್ತಿದ್ದಾರೆ.
ಸಿನಿಮಾದಲ್ಲಿ ಸುನೀಲ್ ರಾವ್ ಅವರೊಂದಿಗೆ ಅಚ್ಯುತ ಕುಮಾರ್, ಸುಧಾರಾಣಿ, ಸಂಯುಕ್ತಾ ಹೆಗಡೆ, ಹಿತಾ ಚಂದ್ರ ಶೇಖರ್, ನಾಗೇಂದ್ರ ಶಾ, ಅರುಣಾ ಬಾಲರಾಜ್ ಅಭಿನಯಿಸಿದ್ದಾರೆ. ನಿರ್ದೇಶಕ ಹೇಮಂತ್ ಕುಮಾರ್ ಈ ಹಿಂದೆ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾಗೆ ಸಹ ನಿರ್ದೇಶಕರಾಗಿದ್ದರು. ಒಂದಿಷ್ಟು ಕಾರ್ಪೋರೇಟ್ ಹಾಗೂ ಆ್ಯಡ್ ಸಿನಿಮಾಗಳ ನಿರ್ದೇಶನ ಮಾಡಿದ್ದಾರೆ.