ಬೆಂಗಳೂರು: ಗಂಧದಗುಡಿ ಸೇರಿದಂತೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಎಂದೂ ಮರೆಯಲಾಗದ ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿ 1960-90ರ ದಶಕದ ಸ್ಟಾರ್ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ರಾಜನ್(Rajan) ಇಂದು ವಿಧಿವಶರಾಗಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ರಾಜನ್ ಕಳೆದ ರಾತ್ರಿ 10.30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಆರ್.ಟಿ ನಗರದ ನಿವಾಸದಲ್ಲಿ ವಿಧಿವಶರಾಗಿದ್ದು, ಇಂದು ಸಂಜೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಮೂಲತಃ ಮೈಸೂರಿನವರಾದ ರಾಜನ್, ಸಹೋದರ ನಾಗೇಂದ್ರ ಜೊತೆಗೂಡಿ 375ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. 1952ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈ ಜೋಡಿ, ಸತತ ಐದು ದಶಕಗಳ ಕಾಲ ಸಂಗೀತ ನಿರ್ದೇಶನ ಮಾಡಿದ್ದಾರೆ. 1952ರಿಂದ 1999ರವರೆಗೆ 375ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದು, ಇದರಲ್ಲಿ ಸುಮಾರು 200 ಚಿತ್ರಗಳು ಕನ್ನಡದವು ಎಂಬುದು ವಿಶೇಷ. ಬರೀ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಶ್ರೀಲಂಕಾದ ಸಿಂಹಳ ಭಾಷೆಯ ಸಿನಿಮಾಗಳಿಗೂ ರಾಜನ್-ನಾಗೇಂದ್ರ ಜೋಡಿ ಸಂಗೀತ ನೀಡಿತ್ತು.

ಅಂದಿನ ಕಾಲಘಟ್ಟದಲ್ಲಿ ಚಿತ್ರಗಳಿಗೆ ರಾಜನ್-ನಾಗೇಂದ್ರ ಜೋಡಿ ಸಂಗೀತ ನೀಡುತ್ತಾರೆ ಎಂದರೆ ಚಿತ್ರ ಬಿಡುಗಡೆಗೂ ಮೊದಲೇ ಹಿಟ್ ಆಗೋದು ಪಕ್ಕಾ ಎಂಬ ಭಾವನೆ ಚಾಲ್ತಿಯಲ್ಲಿತ್ತು. ಕನ್ನಡದ ಅತ್ಯಂತ ಜನಪ್ರಿಯ ಹಾಗೂ ಈಗಲೂ ಗುನುಗುವ ಯಾವುದಾರೂ ಸಿನಿಮಾ ಹಾಡುಗಳು ಇವೆ ಎಂದರೆ ಅದು ರಾಜನ್-ನಾಗೇಂದ್ರ ಸಂಗೀತ ನೀಡಿದ ಹಾಡುಗಳೇ ಎಂಬುದು ವಿಶೇಷ.
ಮಂತ್ರಾಲಯ ಮಹಾತ್ಮೆ, ಗಂಧದ ಗುಡಿ, ನಾ ನಿನ್ನ ಬಿಡಲಾರೆ, ಎರಡು ಕನಸು, ಬಯಲುದಾರಿ, ನಾ ನಿನ್ನ ಮರೆಯಲಾರೆ, ಆಟೋರಾಜ, ಗಾಳಿಮಾತು, ಚಲಿಸುವ ಮೋಡಗಳು, ಪರಸಂಗದ ಗೆಂಡೆತಿಮ್ಮ, ಶ್ರೀನಿವಾಸ ಕಲ್ಯಾಣ ಸೇರಿದಂತೆ ಡಾ.ರಾಜಕುಮಾರ್ ಹಾಗೂ ವಿಷ್ಣುವರ್ಧನ್ರ ಹೆಚ್ಚಿನ ಚಿತ್ರಗಗಳಿಗೆ ರಾಜನ್-ನಾಗೇಂದ್ರ ಜೋಡಿ ಸಂಗೀತ ನಿರ್ದೇಶನ ನೀಡಿದೆ.
ರಾಜನ್ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








