ಕನ್ನಡ ಬಾಷೆಗೆ ಗೂಗಲ್ ನಲ್ಲಿ ಅವಮಾನ – ಆಕ್ರೋಶ ಹೊರಹಾಕಿದ ತಾರೆಯರು ಹೇಳಿದ್ದೇನು..?
‘ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ’ ಎಂಬ ಪ್ರಶ್ನೆಗೆ ‘ಕನ್ನಡ’ ಎಂದು ಗೂಗಲ್ ನ ವೆಬ್ ಸೈಟ್ ನಲ್ಲಿ ತೋರಿಸಲಾಗಿರುವುದು ಕನ್ನಡಿಗರು, ಸಿನಿಮಾ ತಾರೆಯರ ಕೆಂಗಣ್ಣಿಗೆ ಗುರಿಯಾಗಿದೆ.. ಗೂಗಲ್ ವಿರುದ್ಧ ಅಭಿಯಾನವೇ ಶುರುವಾಗಿದೆ.
ಕನ್ನಡಕ್ಕೆ ಅಪಮಾನ ಮಾಡುವಂತೆ ಆರ್ಟಿಕಲ್ ಬರೆದಿರುವ ಪೇಜ್ ಅನ್ನು ರಿಪೋರ್ಟ್ ಮಾಡುವಂತೆ ಕರೆ ನೀಡಲಾಗಿದ್ದು, ಈ ಕುರಿತ ವಿಡಿಯೋಗಳು ಹರಿದಾಡುತ್ತಿವೆ. ಟ್ವಿಟ್ಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ಗೂಗಲ್ ಅನ್ನು ಹಾಗೂ ಸಿಇಓ ಸುಂದರ್ ಪಿಚಾಯ್ ಅನ್ನು ಈ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ. ಹಲವಾರು ಮಂದಿ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಉಪೇಂದ್ರ
ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿ, ಗೂಗಲ್ನಲ್ಲಿ ಕನ್ನಡಕ್ಕೆ ಅಪಮಾನ ಮಾಡುತ್ತಿರುವ ವೆಬ್ಸೈಟ್ ಅನ್ನು ಹೇಗೆ ರಿಪೋರ್ಟ್ ಮಾಡಬೇಕು ಎಂಬ ಮಾಹಿತಿಯುಳ್ಳ ವಿಡಿಯೋ ಹಂಚಿಕೊಂಡಿದ್ದಾರೆ.
‘ಎಲ್ಲಾದರು ಇರು.. ಎಂತಾದರು ಇರು.. ಎಂದೆಂದಿಗು ನೀ ಕನ್ನಡವಾಗಿರು. ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು! ಬನ್ನಿ ಗೂಗಲ್ ನಲ್ಲಿ ರಿಪೋರ್ಟ್ ಮಾಡಿ ಈ ಪ್ರಮಾದವನ್ನು ಸರಿ ಪಡಿಸೋಣ’ ಎಂದು ಬರೆದುಕೊಂಡಿದ್ದಾರೆ.
ನಿರ್ದೇಶಕ ಪನ್ನಗಾಭರಣ
‘ಕ್ವೀನ್ ಆಫ್ ದಿ ಲಾಂಗ್ವೇಜಸ್ ಎಂದು ಸರ್ಚ್ ಮಾಡೋಣ ಆಗಲೂ ಕನ್ನಡವೇ ಬರುತ್ತದೆ. ಹೆಚ್ಚು ಹೆಚ್ಚು ಈ ಸರ್ಚ್ ಮಾಡುವ ಮೂಲಕ ಕನ್ನಡಿಗರ ಶಕ್ತಿ ಪ್ರದರ್ಶಿಸೋಣ’ ಎಂದಿದ್ದಾರೆ.
ನಿಧಿ ಸುಬ್ಬಯ್ಯ
‘ಕೆಟ್ಟ ಭಾಷೆ ಎಂದು ಗೂಗಲ್ ನಲ್ಲಿ ಹುಡುಕಿದಾಗ ಕನ್ನಡ ಎಂದು ಏಕೆ ಬರುತ್ತಿದೆಯೋ ನನಗೆ ಗೊತ್ತಿಲ್ಲ. ಲಿಪಿಗಳ ರಾಣಿ ಎಂದು ಸರ್ಚ್ಮಾಡಿ. ಆಗಲೂ ಕನ್ನಡವೇ ಬರುತ್ತದೆ. ಇದನ್ನು ಹೆಚ್ಚು ಸರ್ಚ್ಮಾಡೋಣ. ಈ ಮೂಲಕ ಹೊರ ಜಗತ್ತಿಗೆ ನಾವು ಏನು ಎಂಬುದನ್ನು ತೋರಿಸೋಣ’ ಎಂದಿದ್ದಾರೆ.
ರಾಗಿಣಿ
ವಿಡಿಯೋ ಮಾಡಿದ್ದು, ‘ಕೆಟ್ಟ ಭಾಷೆ ಎಂದು ಟೈಪ್ ಮಾಡಿದರೆ ಕನ್ನಡ ಎಂಬ ಉತ್ತರ ಗೂಗಲ್ನಲ್ಲಿ ಸಿಗುತ್ತಿದೆ. ಇದನ್ನು ಯಾರು ಮತ್ತು ಏಕೆ ಮಾಡಿದ್ದಾರೆ ಗೊತ್ತಿಲ್ಲ. ಆದರೆ ಅದೇ ಗೂಗಲ್ನಲ್ಲಿ ಕ್ವೀನ್ ಆಫ್ ಲಾಂಗ್ವೇಜಸ್ ಎಂದು ಟೈಪ್ ಮಾಡಿದರೆ ‘ಕನ್ನಡ’ ಎಂಬ ಉತ್ತರವೇ ಬರುತ್ತಿದೆ. ಹಾಗಾಗಿ ನೆಗೆಟಿವಿಟಿ ಬಿಟ್ಟು ಪಾಸಿಟಿವಿಟಿ ಕಡೆಗೆ ಹೋಗೋಣ, ಹೆಚ್ಚು ಹೆಚ್ಚು ಜನ ಕ್ವೀನ್ ಆಫ್ ಲಾಂಗ್ವೇಜಸ್ ಎಂದು ಟೈಪ್ ಮಾಡಿ’ ಎಂದು ಮನವಿ ಮಾಡಿದ್ದಾರೆ.