ಸಂದೀಪ್ ಮಲಾನಿ ಅಭಿನಯದ 100ನೇ ಚಿತ್ರ “ಹೀಗೇಕೆ ನೀ ದೂರ ಹೋಗುವೆ”
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸದ್ಯದಲ್ಲೇ ಓಟಿಟಿ ಮೂಲಕ ಬಿಡುಗಡೆ
ನಟ, ನಿರ್ದೇಶಕ ಸಂದೀಪ್ ಮಲಾನಿ ನಟಿಸಿರುವ ನೂರನೇ ಚಿತ್ರ “ಹೀಗೇಕೆ ನೀ ದೂರ ಹೋಗುವೆ”. ಈಗಾಗಲೇ ಚಿತ್ರೀಕರಣ ಬಹುತೇಕ ಪೂರ್ಣವಾಗಿರುವ ಈ ಚಿತ್ರ ಅಂತಿಮ ಹಂತದಲ್ಲಿದೆ. ಈ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ನಾನು ಈವರೆಗೂ ತುಳು, ತಮಿಳು, ಕೊಂಕಣಿ, ಕನ್ನಡ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ. ” ಹೀಗೇಕೆ ನೀ ದೂರ ಹೋಗುವೆ” ನನ್ನ ನಟನೆಯ ನೂರನೇ ಚಿತ್ರ. ಈ ಚಿತ್ರದ ನಿರ್ದೇಶಕನೂ ನಾನೇ.. ಇದು ನನಗಿಷ್ಟವಾದ ಜನಪ್ರಿಯ ಗೀತೆಯೊಂದರ ಸಾಲು. ಚಿತ್ರದ ಕಥೆ ಹಾಗೂ ಶೀರ್ಷಿಕೆಗೂ ಸಂಬಂಧವಿದೆ. ನಾನು ನಟಿಸಲೂ ಬೇಕಾದ ಕಾರಣ, ನನ್ನ ಮಗ ಸಿಲ್ವರ್ ಮಲಾನಿ ಹಾಗೂ ತಮ್ಮ ಸಂತೋಷ್ ಇಬ್ಬರು ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ನನಗೆ ಸಹಾಯ ಮಾಡಿದ್ದಾರೆ.
ರಾಜೇಶ್ ಚೌಧರಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಿದ್ದೇವೆ. ನನ್ನೊಂದಿಗೆ ಎಸ್ತರ್ ನರೋನ್ಹಾ, ಗಾಯಕರಾಗಿ ಖ್ಯಾತ ರಾಗಿ ಈ ಸಿನಿಮಾ ಮೂಲಕ ನಟನೆ ಆರಂಭಿಸಿರುವ ನಿಹಾಲ್ ತಾವ್ರೋ ಹಾಗೂ ಅಶ್ವಿನ್ ಡಿ ಕೋಸ್ಟಾ, ರಾಜೀವ್ ಪಿಳ್ಳೈ, ಸೀಮಾ ಬುತೆಲ್ಲೋ, ಉದಯ ಸೂರ್ಯ ಮತ್ತು ನಿರ್ಮಾಪಕರ ಪುತ್ರಿಯರಾದ ಅಶ್ಮಿತಾ ಚೌಧರಿ, ಅಮೀಶಾ ಚೌಧರಿ ಮುಂತಾದವರು ಅಭಿನಯಿಸಿದ್ದಾರೆ. ಇದು ತಂದೆ – ಮಗನ ಅವಿನಾಭಾವ ಸಂಬಂಧದ ಸುತ್ತ ಹೆಣೆಯಲಾದ ಕಥೆಯಾಗಿದೆ. ಕನ್ನಡದಲ್ಲಷ್ಟೇ ಅಲ್ಲದೇ ಹಿಂದಿಯಲ್ಲಿ “ದಿ ವಿಸಿಟರ್ಸ್” ಎಂಬ ಹೆಸರಿನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಕೊಂಕಣಿ, ತಮಿಳು, ತೆಲುಗು ಹಾಗೂ ಮಲೆಯಾಳಂ ಚಿತ್ರಕ್ಕೆ ಡಬ್ಬ್ ಆಗಲಿದೆ ಎಂದು ಚಿತ್ರದ ಸಂಪೂರ್ಣ ಮಾಹಿತಿ ನೀಡಿದರು ಸಂದೀಪ್ ಮಲಾನಿ.
ನವೆಂಬರ್ 16ಕ್ಕೆ ಪ್ಯಾಲೇಸ್ ಗ್ರೌಂಡ್ ನಲ್ಲಿ ಅಪ್ಪುಗೆ ನುಡಿ ನಮನ – ಒಟ್ಟಾಗಲಿದೆ ಇಡೀ ಚಿತ್ರರಂಗ
ನಾನು ಮೂಲತಃ ಉದ್ಯಮಿ. ಜೀಟಿವಿ ಯಲ್ಲಿ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದೆ. ಸಂದೀಪ್ ಮಲಾನಿ ಅವರು ಕಥೆ ಹೇಳಿದರು. ನಾನು, ನನ್ನ ಮಗಳು ಇಬ್ಬರೂ ಕಥೆ ಕೇಳಿದೆವು. ಇಷ್ಟವಾಯಿತು. ನನಗೂ ಮಕ್ಕಳ ಜೊತೆ ಕುಳಿತು ನೋಡುವ ಸಿನಿಮಾ ನಿರ್ಮಾಣ ಮಾಡಬೇಕೆಂಬ ಆಸೆಯಿತ್ತು. ನನ್ನ ಮಕ್ಕಳಾದ ಅಸ್ಮಿತಾ ಹಾಗೂ ಅಮೀಶಾ ಅವರ ಹೆಸರಿನಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಅವರಿಬ್ಬರೂ ಇದರಲ್ಲಿ ನಟಿಸಿದ್ದಾರೆ. ಈ ಚಿತ್ರದ ನಂತರ ವಿಭಿನ್ನ ಕಥೆಯುಳ್ಳ ಚಿತ್ರಗಳನ್ನು ನಿರ್ಮಿಸುವ ಆಲೋಚನೆಯಿದೆ ಎಂದರು ನಿರ್ಮಾಪಕ ರಾಜೇಶ್ ಚೌಧರಿ. ನಾನು ಹಾಗೂ ಸಂದೀಪ್ ಮಲಾನಿ ಶಕೀಲ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ನಂತರ ಒಂದು ದಿನ ಫೋನ್ ಮಾಡಿ ಈ ಚಿತ್ರದ ಬಗ್ಗೆ ಹೇಳಿದರು. ತುಂಬಾ ಒಳ್ಳೆಯ ಪಾತ್ರ ನೀಡಿದ್ದಾರೆ. ಚಿತ್ರ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂದರು ನಟಿ ಎಸ್ತರ್ ನರೋನ್ಹ.
ನನಗೆ ಸಂದೀಪ್ ಮಲಾನಿ ಅವರು ಕಾಲ್ ಮಾಡಿ ಚಿತ್ರದ ಕಥೆ ಹೇಳಿದರು. ತುಂಬಾ ಚೆನ್ನಾಗಿದೆ ಅಂದೆ. ಮನಸ್ಸಿನಲ್ಲಿ ಇದೇನಪ್ಪಾ ಸಿಂಗರ್ ಗೆ ಆ ಸನ್ನಿವೇಶ ಹೇಳಿದರೆ ಸಾಕು. ಇವರು ಪೂರ್ತಿ ಕಥೆ ಹೇಳುತ್ತಿದ್ದಾರೆ ಅಂದು ಕೊಂಡೆ. ನಂತರ ಅವರು ಹೇಳಿದ್ದು, ನೀವು ಈ ಚಿತ್ರದಲ್ಲಿ ಹಾಡಿತ್ತಿಲ್ಲ. ನಟಿಸುತ್ತಿದ್ದೀರಾ ಅಂತ. ಕೇಳಿ ಆಶ್ಚರ್ಯವಾಯಿತು. ಒಪ್ಪಿಕೊಂಡೆ. ಪಾತ್ರ ತುಂಬಾ ಹಿಡಿಸಿತು ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿಹಾಲ್ ತಾವ್ರು. ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿಲ್ವರ್ ಮಲಾನಿ, ಸಂತೋಷ್ ಚಾವ್ಲಾ, ಛಾಯಾಗ್ರಾಹಕ ಸೆಲ್ವಂ, ನಟರಾದ ಉದಯ್ ಕಿರಣ್, ಅಶ್ವಿನ್ ಡಿ ಕೋಸ್ಟಾ, ಸೀಮಾ ಬುತೆಲ್ಲೋ, ಹರೇರಾಮ್ ಠಾಕೂರ್, ಅಶ್ಮಿತಾ, ಅಮಿಶಾ, ರಾಜೀವ್ ಪಿಳ್ಳೈ ಚಿತ್ರದ ಬಗ್ಗೆ ಹಾಗೂ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.