ಕೆ ಎಸ್ ಈಶ್ವರಪ್ಪ ರಾಜಿನಾಮೆ ಕೇಳಿದ ಹೈಕಮಾಂಡ್ – ಸಿಎಂ ಭೇಟಿ ಬಳಿಕ ನಿರ್ಧಾರ
ಉಡುಪಿ ಲಾಡ್ಜ್ ನಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಹೆಸರು ಕೇಳಿಬರುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ಸಚಿವರ ವಿರುದ್ಧ ಗರಂ ಆಗಿದ್ದು ರಾಜೀನಾಮೆ ನೀಡುವಂತೆ ಸೂಚನೆ ನೀಡಿದೆ ಎನ್ನುವ ಮಾಹಿತಿ ಹೈಕಮಾಂಡ ಮೂಲಗಳಿಂದ ಕೇಳಿಬರುತ್ತಿದೆ.
ಮೈಸೂರಿನಲ್ಲಿ ಪಕ್ಷ ಸಂಘಟನೆಗಾಗಿ ಈಶ್ವರಪ್ಪ ನೇತೃತ್ವದಲ್ಲಿ ಯಾತ್ರೆ ನಡೆಸಬೇಕಿತ್ತು. ಹಲವು ಪ್ರಮುಖರನ್ನ ಬೇಟಿಯಾಗಿ ಸಂಘಟನೆ ಬಲಪಡಿಸಬೇಕಾಗಿತ್ತು. ಆದರೆ ಯಾವುದೋ ಪೋನ್ ಕರೆ ಬಂದ ಕಾರಣ ಈಶ್ವರಪ್ಪ ತರಾತುರಿಯಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ಇದರಿಂದ ಹೈಕಮಾಂಡ್ ಈಶ್ವರಪ್ಪ ಅವರ ರಾಜಿನಾಮೆ ಕೇಳಿದೆ ಎನ್ನಲಾಗುತ್ತಿದೆ.
ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನ ಬೇಟಿ ಮಾಡಿ ನಂತರ ರಾಜಿನಾಮೆ ಬಗ್ಗೆ ಈಶ್ವರಪ್ಪ ಅಂತಿಮ ನಿರ್ಧಾರಕ್ಕೆ ಬರಬಹುದು. ಇತ್ತ ಮಂಗಳೂರು ಪ್ರವಾಸದಲ್ಲಿರುವ ಸಿಎಂ ಮಧ್ಯಾಹ್ನ ರಾಜಧಾನಿಗೆ ವಾಪಸ್ಸಾಗಲಿದ್ದಾರೆ.
ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತರಾಗಿದ್ದ ಸಂತೋಷ್ ಪಾಟೀಲ್ ಮಾಧ್ಯಮ ಪತ್ರಿನಿಧಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸೋಮವಾರ ತಡರಾತ್ರಿ ವಾಟ್ಸಪ್ ಮೆಸೇಜ್ ಮಾಡಿದ್ದರು. ತಮ್ಮ ವಾಟ್ಸಪ್ ಸಂದೇಶದ್ಲಿ, ನನ್ನ ಸಾವಿಗೆ ಕೆ.ಎಸ್.ಈಶ್ವರಪ್ಪ ಕಾರಣ ಎಂದು ಉಲ್ಲೇಖಿಸಿದ್ದರು. ಈಶ್ವರಪ್ಪ ಅವರಿಗೆ ಶಿಕ್ಷೆಯಾಗಬೇಕು. ನನ್ನೆಲ್ಲಾ ಆಸೆ ಬದಿಗೊತ್ತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು, ಬಿ.ಎಸ್.ಯಡಿಯೂರಪ್ಪ ಸಹಾಯ ಮಾಡಬೇಕೆಂದು ಮೆಸೆಜ್ ನಲ್ಲಿ ಉಲ್ಲೇಖಿಸಿದ್ದರು.