ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿಯ ದರ್ಶನಕ್ಕೆ ಭಕ್ತರಿಗಾಗಿ ತಿರುಪತಿ ಮಾದರಿಯಲ್ಲಿ ಸುಸಜ್ಜಿತ ಸೌಕರ್ಯಗಳನ್ನೊಳಗೊಂಡ ಆರಾಮದಾಯಕ ಸರತಿ ಸಾಲಿನ ವ್ಯವಸ್ಥೆಯ ನೂತನ ಸಂಕೀರ್ಣ ‘ಶ್ರೀ ಸಾನ್ನಿಧ್ಯ’ವನ್ನು ನಿರ್ಮಿಸಲಾಗಿದೆ.
ಉದ್ಘಾಟನೆ:
ಜ.7ರಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಈ ನೂತನ ಸಂಕಿರ್ಣವನ್ನು ಉದ್ಘಾಟಿಸಲಿದ್ದಾರೆ. ಡಾ.ಸುದೇಶ ಧನಕರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಹೇಮಾವತಿ ವೀ. ಹೆಗ್ಗಡೆ, ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭಾಗವಹಿಸುವರು. ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸೌಲಭ್ಯಗಳು:
ಸಕಲ ಸೌಲಭ್ಯಗಳನ್ನೊಳಗೊಂಡ ಸರತಿ ಸಾಲಿನ ಸಮುಚ್ಚಯ 2,75,177 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದ್ದು, 2 ಅಂತಸ್ತು ಹೊಂದಿದೆ. ಸಂಕೀರ್ಣದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಭಕ್ತರಿಗೆ ಎಲ್ಲ ಸೌಲಭ್ಯ ಅಳವಡಿಸಲಾಗಿದೆ. 16 ವಿಶಾಲ ಭವನಗಳಿದ್ದು, ಸರತಿಸಾಲಿನಲ್ಲಿ ಬಂದ ಭಕ್ತರು ವಿಶ್ರಾಂತಿ ಪಡೆಯಬಹುದು. ಪ್ರತಿ ಭವನದಲ್ಲಿ 800 ಮಂದಿ ತಂಗಲು ಅವಕಾಶವಿದೆ.
ವಿಶೇಷತೆಗಳು:
ವಿಶಾಲವಾದ ಭವನದಲ್ಲಿ ಕುರ್ಚಿಗಳ ಮೇಲೆ ಕುಳಿತು ಕ್ರಮೇಣವಾಗಿ ಮುಂದಿನ ಭವನಗಳಿಗೆ ಸ್ಥಳಾಂತರಗೊಳ್ಳಬಹುದು. ಭವನಗಳಲ್ಲಿ ಮಕ್ಕಳ ಆರೈಕೆ ಕೊಠಡಿ, ಶೌಚಗೃಹ, ಕ್ಯಾಂಟೀನ್ ಸೌಲಭ್ಯವಿದೆ. ಅಲ್ಲಲ್ಲಿ ಸೂಚನಾ ಫಲಕ ಹಾಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪ್ರವೇಶದ್ವಾರದ ಎದುರು ಧರ್ಮಸ್ಥಳದ ಇತಿಹಾಸ ಮತ್ತು ಪರಂಪರೆ ಬಿಂಬಿಸುವ ಆಕರ್ಷಕ ಕಲಾಕೃತಿಗಳನ್ನು ಅಳವಡಿಸಲಾಗಿದೆ.
ರಾಜ್ಯದಲ್ಲಿ ಪ್ರಥಮ ಬಾರಿಗೆ ತಿರುಪತಿ ಮಾದರಿಯಲ್ಲಿ ಸರತಿ ಸಾಲಿನ ವ್ಯವಸ್ಥೆಯ ನೂತನ ಸಂಕೀರ್ಣವನ್ನು ಧರ್ಮಸ್ಥಳದಲ್ಲಿ ನಿರ್ಮಿಸಲಾಗಿದೆ. ಇದು ಭಕ್ತರಿಗೆ ಹೆಚ್ಚು ಆರಾಮದಾಯಕ ಮತ್ತು ಸುಸಜ್ಜಿತ ದರ್ಶನದ ಅನುಭವವನ್ನು ನೀಡಲಿದೆ.








