ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪಂಚ ಪಾಲಿಕೆಗಳಲ್ಲಿ ಖಾಲಿ ನಿವೇಶನಗಳ ಮಾಲೀಕರಿಗೆ ಜಿಬಿಎ ನೀಡಿದ ಒಂದು ಖಡಕ್ ಎಚ್ಚರಿಕೆ ಇಡೀ ನಗರದಲ್ಲಿ ಭಾರೀ ಸಂಚಲನ ಮೂಡಿಸಿದೆ. ನಗರದ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದು, ಕಸದ ರಾಶಿ ಬಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಆಯಾ ಸೈಟ್‌ಗಳ ಮಾಲೀಕರೇ ತಕ್ಷಣವೇ ತಮ್ಮ ಜಾಗವನ್ನು ಶುಚಿಗೊಳಿಸಬೇಕು, ಇಲ್ಲದಿದ್ದರೆ ಅಡಿ ಲೆಕ್ಕದಲ್ಲಿ ಭಾರೀ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ನೀಡಿರುವ ಗಡುವು ಈಗ ಸೈಟ್ ಮಾಲೀಕರನ್ನು ನಿದ್ದೆಗೆಡಿಸಿದೆ.
ಆಗಸ್ಟ್ 22 ರೊಳಗೆ ಖಾಲಿ ಜಾಗಗಳನ್ನು ಕ್ಲೀನ್ ಮಾಡದಿದ್ದರೆ ಬಿಬಿಎಂಪಿ ಹಾಗೂ ಜಿಬಿಎ ಸಿಬ್ಬಂದಿಯೇ ಸ್ವತಃ ಬಂದು ಜಾಗ ಶುಚಿಗೊಳಿಸಿ, ಅದರ ಸಂಪೂರ್ಣ ವೆಚ್ಚವನ್ನು ದಂಡದ ರೂಪದಲ್ಲಿ ಮಾಲೀಕರಿಂದ ವಸೂಲಿ ಮಾಡಲಿದ್ದಾರೆ. ಈ ದಂಡದ ಪ್ರಮಾಣ ಅತ್ಯಂತ ಹೆಚ್ಚಿರಲಿದ್ದು, ತೆರಿಗೆಯೊಂದಿಗೆ ವಸೂಲಿ ಮಾಡಲು ಆಡಳಿತ ಮಂಡಳಿ ಯೋಜನೆ ರೂಪಿಸಿದೆ. ಈ ಎಚ್ಚರಿಕೆಗೆ ಹೆದರಿರುವ ಸೈಟ್ ಮಾಲೀಕರು ಎದ್ವೋ ಬಿದ್ವೋ ಎಂದು ತಮ್ಮ ನಿವೇಶನಗಳನ್ನು ಶುಚಿಗೊಳಿಸಲು ಧಾವಿಸುತ್ತಿದ್ದು, ನಗರದಾದ್ಯಂತ ಜೆಸಿಬಿ ಯಂತ್ರಗಳಿಗೆ ಅಭೂತಪೂರ್ವ ಬೇಡಿಕೆ ಸೃಷ್ಟಿಯಾಗಿದೆ.
ಖಾಲಿ ನಿವೇಶನದಾರರ ಈ ತುರ್ತು ಸ್ಥಿತಿ ಮತ್ತು ಆತುರವನ್ನೇ ತಮ್ಮ ಲಾಭದಾಯಕ ಬಂಡವಾಳವನ್ನಾಗಿ ಮಾಡಿಕೊಂಡಿರುವ ಜೆಸಿಬಿ ಮಾಲೀಕರು, ಬಾಡಿಗೆ ದರವನ್ನು ಮನಸ್ಸೋ ಇಚ್ಛೆ ಹೆಚ್ಚಿಸಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಗಂಟೆಗೆ ಕೇವಲ ಒಂದು ಸಾವಿರ ರೂಪಾಯಿ ಬಾಡಿಗೆಗೆ ಸಿಗುತ್ತಿದ್ದ ಜೆಸಿಬಿಗಳು, ಈಗ ಗಂಟೆಯ ಲೆಕ್ಕ ಬಿಟ್ಟು ನೇರವಾಗಿ ಪ್ರತಿಯೊಂದು ಸೈಟ್ ಲೆಕ್ಕದಲ್ಲಿ ಕಾಂಟ್ರಾಕ್ಟ್ ಮಾತನಾಡುತ್ತಿವೆ.
ಪ್ರಸ್ತುತ ಸಣ್ಣ ಅಳತೆಯ ನಿವೇಶನಗಳನ್ನು ಕ್ಲೀನ್ ಮಾಡಲು ಎಂಟು ಸಾವಿರ ರೂಪಾಯಿ ಹಾಗೂ ದೊಡ್ಡ ಗಾತ್ರದ ನಿವೇಶನಗಳನ್ನು ಶುಚಿಗೊಳಿಸಲು ಒಂಬತ್ತರಿಂದ ಹತ್ತು ಸಾವಿರ ರೂಪಾಯಿವರೆಗೆ ಭಾರಿ ದರ ವಿಧಿಸಲಾಗುತ್ತಿದೆ. ಜಿಬಿಎ ನೀಡಿದ ಕೊನೆಯ ದಿನಾಂಕ ಸಮೀಪಿಸುತ್ತಿರುವುದರಿಂದ, ಅನಿವಾರ್ಯತೆಗೆ ಸಿಲುಕಿರುವ ಜನರು ಜೆಸಿಬಿ ಮಾಲೀಕರು ಕೇಳಿದಷ್ಟು ಹಣ ನೀಡಿ ಕೆಲಸ ಮುಗಿಸಿಕೊಳ್ಳುತ್ತಿದ್ದಾರೆ.
ಅದರಲ್ಲೂ ವಿಶೇಷವಾಗಿ ಬಿಡಿಎ ನಿರ್ಮಿಸಿರುವ ಬೃಹತ್ ನಾಡಪ್ರಭು ಕೆಂಪೇಗೌಡ ಬಡಾವಣೆಯ ಸುತ್ತಮುತ್ತ ಸಾವಿರಾರು ಖಾಲಿ ನಿವೇಶನಗಳಿದ್ದು, ಅಲ್ಲಿ ಜೆಸಿಬಿಗಳಿಗಾಗಿ ಸೈಟ್ ಮಾಲೀಕರ ನಡುವೆ ಜಟಾಪಟಿಯೇ ಏರ್ಪಟ್ಟಿದೆ. ಬಡಾವಣೆಯ ಪ್ರತಿಯೊಂದು ರಸ್ತೆಯಲ್ಲೂ ಜೆಸಿಬಿಗಳ ಸದ್ದೇ ಕೇಳಿಬರುತ್ತಿದ್ದು, ಮಾಲೀಕರು ಸರದಿಯಲ್ಲಿ ನಿಂತು ತಮ್ಮ ಸೈಟ್ ಶುಚಿಗೊಳಿಸುತ್ತಿದ್ದಾರೆ.
ಆಡಳಿತ ಮಂಡಳಿಯು ನಗರದ ಶುಚಿತ್ವ ಕಾಪಾಡಲು ನೀಡಿರುವ ಆದೇಶ ಸ್ವಾಗತಾರ್ಹವಾದರೂ, ತೀರಾ ಕಡಿಮೆ ಸಮಯ ನೀಡಿರುವುದರಿಂದ ಜೆಸಿಬಿ ಮಾಲೀಕರ ಸುಲಿಗೆಗೆ ನಾವು ಬಲಿಯಾಗುತ್ತಿದ್ದೇವೆ. ಅಧಿಕಾರಿಗಳು ಜೆಸಿಬಿ ಬಾಡಿಗೆ ದರಕ್ಕೆ ಸೂಕ್ತ ಮಿತಿ ಹೇರಬೇಕು ಅಥವಾ ಶುಚಿಗೊಳಿಸಲು ನೀಡಲಾದ ಕಾಲಾವಕಾಶವನ್ನು ಇನ್ನು ಕೆಲವು ದಿನಗಳ ಕಾಲ ವಿಸ್ತರಿಸಬೇಕು ಎಂದು ಸಂಕಷ್ಟಕ್ಕೊಳಗಾದ ನಿವೇಶನದಾರರು ಆಕ್ರೋಶದೊಂದಿಗೆ ಮನವಿ ಮಾಡುತ್ತಿದ್ದಾರೆ.







