ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಇದೇ ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಗ್ಲಿಂಪ್ಸ್, ಟೀಸರ್ ಹಾಗೂ ಟ್ರೇಲರ್ನಲ್ಲಿ ಕೆಲವು ಬೋಲ್ಡ್ ದೃಶ್ಯಗಳು ಗಮನ ಸೆಳೆದಿವೆ.
ಈ ದೃಶ್ಯಗಳನ್ನು ನೋಡಿದ ಬಳಿಕ ಯಶ್ ಅವರ ಪತ್ನಿ ಹಾಗೂ ನಟಿ ರಾಧಿಕಾ ಪಂಡಿತ್ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಇದೀಗ ಯಶ್ ಅವರು ಸ್ವತಃ ಈ ಬಗ್ಗೆ ಮಾತನಾಡಿದ್ದಾರೆ.
‘ಪ್ರತಿಯೊಬ್ಬ ಪಾರ್ಟ್ನರ್ಗೂ ಅನ್ಕಮ್ಫರ್ಟಬಲ್ ಆಗುತ್ತದೆ’
ಇಂಡಿಯಾ ಟಿವಿಯ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ತಮ್ಮ ಸಿನಿಮಾ ಪಯಣ, ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದರು. ಈ ವೇಳೆ ನಿರೂಪಕರು ರಾಧಿಕಾ ಪಂಡಿತ್ ಅವರ ಪ್ರತಿಕ್ರಿಯೆಯ ಬಗ್ಗೆ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಯಶ್, ನಾನು ನಿಜ ಹೇಳುತ್ತೇನೆ. ಪ್ರತಿಯೊಬ್ಬ ಪಾರ್ಟ್ನರ್ ಕೂಡ ಅನ್ಕಮ್ಫರ್ಟಬಲ್ ಆಗುತ್ತಾರೆ. ಸುಳ್ಳು ಹೇಳುವುದು ನನಗೆ ಇಷ್ಟವಿಲ್ಲ. ಪ್ರತಿಯೊಬ್ಬ ಪಾರ್ಟ್ನರ್ಗೂ ಬೇಸರ ಆಗುತ್ತದೆ ಎಂದು ಹೇಳಿದ್ದಾರೆ.
ಆದರೆ, ‘ಟಾಕ್ಸಿಕ್’ ಒಂದು ಸಿನಿಮಾ ಹಾಗೂ ಕಲಾಕೃತಿ. ಕಥೆಗೆ ಅಗತ್ಯವಿದ್ದ ಕಾರಣ ತಾನು ತನ್ನ ಕಂಫರ್ಟ್ ಝೋನ್ನಿಂದ ಹೊರಬಂದು ಕೆಲವು ದೃಶ್ಯಗಳಲ್ಲಿ ನಟಿಸಿದ್ದೇನೆ ಎಂದು ಯಶ್ ವಿವರಿಸಿದ್ದಾರೆ.
ರಾಧಿಕಾ ಪಂಡಿತ್ ಈ ದೃಶ್ಯಗಳನ್ನು ನೋಡಿ ಖುಷಿಯಾಗಿಲ್ಲ. ಆದರೆ ಅದೇ ಸಮಯದಲ್ಲಿ ಅವರು ಅಪ್ಸೆಟ್ ಕೂಡ ಆಗಿಲ್ಲ. ಅವರಿಗೆ ನನ್ನ ಮೇಲೆ ನಂಬಿಕೆ ಇದೆ ಎಂದು ಯಶ್ ಹೇಳಿದ್ದಾರೆ.
‘ಅವಳಿಗೂ ಇದು ಕೆಲಸ ಎಂಬುದು ಅರ್ಥವಾಗುತ್ತದೆ’
ರಾಧಿಕಾ ಪಂಡಿತ್ ಅವರೂ ನಟಿಯಾಗಿರುವುದರಿಂದ ಸಿನಿಮಾದಲ್ಲಿ ಇಂತಹ ದೃಶ್ಯಗಳು ಕಥೆಯ ಭಾಗವಾಗಿ ಬರಬಹುದು ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ ಎಂದು ಯಶ್ ತಿಳಿಸಿದ್ದಾರೆ.
ನಾನು ಅಲ್ಲಿ ಪರ್ಫಾರ್ಮ್ ಮಾಡುವಾಗ ನಟನಾಗಿ ಮಾಡುತ್ತಿದ್ದೇನೆ. ರಾಧಿಕಾ ಪಂಡಿತ್ ಅವರ ಪತಿಯಾಗಿ ಅಲ್ಲ ಎಂಬ ಯಶ್ ಅವರ ಮಾತು ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.
‘ಟಾಕ್ಸಿಕ್’ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಯಶ್ ಅವರ ಈ ಹೇಳಿಕೆ ಸಿನಿಮಾದ ಬೋಲ್ಡ್ ದೃಶ್ಯಗಳ ಬಗ್ಗೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.







