ಕೊರೊನಾ ಸಂಕಷ್ಟ – ಬಡವರ ನೆರವಿಗೆ ರಿಯಲ್ ಹೀರೋ ಜೊತೆ ಕೈ ಜೋಡಿಸಿದ ಸಾರಾ ಅಲಿ ಖಾನ್
ಮುಂಬೈ : ದೇಶದಲ್ಲಿ ಕೊರೊನಾ ಹೆಮ್ಮಾರಿಯಿಂದ ನಿತ್ಯ ಸಾವಿರಾರು ಜನರು ಪ್ರಾಣ ಕಳೆದುಕೊಳ್ತಿದ್ದಾರೆ. ಸ್ಯಾಂಡಲ್ ವುಡ್ , ಬಾಲಿವುಡ್ , ಕಾಲಿವುಡ್ , ಮಾಲಿವುಡ್ , ಟಾಲಿವುಡ್ ಸೇರಿ ಸಿನಿಮಾರಂಗದವರು, ಸೆಲೆಬ್ರಿಟಿಗಳು ತಾರೆಯರು ಕೂಡ ಮಹಾಮಾರಿಗೆ ಬಲಿಯಾಗಿದ್ದಾರೆ.
ಈ ನಡುವೆ ಸ್ಯಾಂಡಲ್ ವುಡ್ , ಬಾಲಿವುಡ್ , ಟಾಲಿವುಡ್ , ಕಾಲಿವುಡ್ ನ ಅನೇಕ ಸಿನಿಮಾ ತಾರೆಯರು ಬಡವರಿಗೆ , ಕೋವಿಡ್ ಸೋಂಕಿತರಿಗೆ ತಮಗೆ ತೋಚಿದ ಸಹಾಯಗಳನ್ನ ಮಾಡುತ್ತಿದ್ದಾರೆ. ಅದ್ರಲ್ಲೂ ಕಳೆದ ವರ್ಷ ಲಾಕ್ ಡೌನ್ ಆದಾಗಿನಿಂದಲೂ ಬಾಲಿವುಡ್ ನಟ ಸೋನೊ ಸೂದ್ ಬಡವರು, ವಿದ್ಯಾರ್ಥಿಗಳು, ವಲಸೆ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ಅಲ್ಲದೇ ಜನರಿಗೆ ಸಹಾಯ ಮಾಡುವುದಕ್ಕಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿದ್ದಾರೆ.
ಕೊರೊನಾ 2ನೇ ಅಲೆ ವೇಳೆಯೂ ಸೋನು ಸೂದ್ ಫೌಂಡೇಶನ್ ಮೂಲಕ ಕಷ್ಟದಲ್ಲಿರುವವರಿಗೆ ಸಹಾಯ ಮುಂದುವರಿಸಿದ್ದಾರೆ. ಇದೀಗ ಸೋನು ಸೂದ್ಗೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸಾಥ್ ನೀಡಿದ್ದಾರೆ. ಸೋನು ಸೂದ್ ಫೌಂಡೇಶನ್ಗೆ ದೇಣಿಗೆ ನೀಡುವ ಮೂಲಕ ಸೋನು ಅವರ ಮಾನವೀಯತೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸೋನು ಸೂದ್ ಫೌಂಡೇಶನ್ಗೆ ದೇಣಿಗೆ ನೀಡಿದ್ದಕ್ಕಾಗಿ ಟ್ವಿಟ್ಟರ್ ಮೂಲಕ ಸಾರಾ ಅಲಿ ಖಾನ್ಗೆ ಧನ್ಯವಾದ ಅರ್ಪಿಸಿದ್ದಾರೆ. ‘ಈ ಕಷ್ಟದ ಸಮಯದಲ್ಲಿ ರಾಷ್ಟ್ರದ ಯುವಕರು ಮುಂದೆ ಬಂದು ಸಹಾಯ ಮಾಡಲು ನೀವು ಪ್ರೇರಣೆ ನೀಡಿದ್ದೀರಿ. ನೀವು ಹೀರೋ, ನಿಮ್ಮ ಬಗ್ಗೆ ಹೆಮ್ಮೆ ಇದೆ’ ಎಂದಿದ್ದಾರೆ.