Satish Jarakiholi – ಹಿಂದೂ ಭಾರತೀಯ ಪದವೇ ಅಲ್ಲ..
ಬೆಳಗಾವಿ : ಹಿಂದೂ ಭಾರತೀಯ ಪದವೇ ಅಲ್ಲ. ಪರ್ಷಿಯನ್ ಭಾಷೆಯ ಪದವಾಗಿದ್ದು, ನಾನು ಹೇಳಿದ್ದರಲ್ಲಿ ತಪ್ಪಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಸತೀಶ್ ಜಾರಕಿಹೊಳಿ ಮಾತನಾಡುತ್ತಾ, ಹಿಂದೂ ಭಾರತೀಯ ಪದವೇ ಅಲ್ಲ, ಪರ್ಷಿಯನ್ ಪದ ಅದರ ಅರ್ಥ ಬಹಳ ಅಶ್ಲೀಲವಾಗಿದೆ ಎಂದಿದ್ದು, ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ಹೇಳಿದ ಒಂದು ಶಬ್ದದ ವಿಷಯ ಮೇಲೆ ಇವತ್ತು ಇಡೀ ರಾಷ್ಟ್ರ ರಾಜ್ಯ ಮಟ್ಟದಲ್ಲಿ ಚರ್ಚೆ, ವಿಮರ್ಶೆ ಆಗುತ್ತಿದೆ.
ಟೀಕೆಗಳು ಕೇಳಿಬರುತ್ತಿವೆ. ಹೀಗಾಗಿ ಅದರ ಬಗ್ಗೆ ಸ್ಪಷ್ಟನೆ ನೀಡುವುದು ನನ್ನ ಕರ್ತವ್ಯವಾಗಿದೆ.
ಹಿಂದೂ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದ್ದು ಅಂತಾ ಉಲ್ಲೇಖ ಮಾಡಿದ್ದು ನಿಜ.
ಹಿಂದೂ ಶಬ್ದದ ಬಗ್ಗೆ ಕೆಲವು ನಿಂದನೆ ಮಾಡುವಂತ ಸಾಕಷ್ಟು ಶಬ್ದಗಳು ದಾಖಲೆಗಳಲ್ಲಿ ಸಿಗುತ್ತವೆ. ನಾನು ಅದರ ಬಗ್ಗೆ ಕೋಟ್ ಮಾಡಿದ್ದೇನೆ ಎಂದಿದ್ದಾರೆ.
ಅಲ್ಲದೇ ಹಿಂದೂ, ಪಾರ್ಸಿ, ಇಸ್ಲಾಂ, ಜೈನ ಹಾಗೂ ಬೌದ್ಧ ಧರ್ಮ ಯಾವುದೇ ಇರಲಿ, ಜಾತಿ ಧರ್ಮವನ್ನು ಮೀರಿ ನಾವು ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ನಾನು ಹೇಳಿದರಲ್ಲಿ ಯಾವುದೇ ತಪ್ಪಿಲ್ಲ.
ಹಿಂದೂ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದ್ದಕ್ಕೆ ನೂರಾರು ದಾಖಲೆಗಳಿವೆ. ಬಾಲಗಂಗಾಧರ ತಿಲಕ್ ಅವರ ಕೇಸರಿ ಪತ್ರಿಕೆಯಲ್ಲೂ ಉಲ್ಲೇಖವಿದೆ.
ಆದ್ರೆ ನನ್ನ ಹೇಳಿಕೆಯನ್ನು ಉಕ್ರೇನ್ – ರಷ್ಯಾ ಯುದ್ಧ ಮಾದರಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ ಎಂದು ವಿಡಿಯೋದಲ್ಲಿ ಸತೀಶ್ ಜಾರಕಿಹೊಳಿ ಅಸಮಾಧಾನ ಹೊರಹಾಕಿದ್ದಾರೆ.