ವಿಜಯಪುರ: ಕೊಳವೆ ಬಾವಿಯಲ್ಲಿ ಬಿದ್ದಿದ್ದ ಸಾತ್ವಿಕ್ ಕೊನೆಗೆ ಪವಾಡ ಎಂಬಂತೆ ಬದುಕುಳಿದಿದ್ದಾನೆ. ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದ ಕೊಳವೆ ಬಾವಿಗೆ 2 ವರ್ಷದ ಸಾತ್ವಿಕ್ ಬಿದ್ದಿದ್ದ. ತಲೆ ಕೆಳಗಾಗಿ ಬಿದ್ದರೂ 17 ಗಂಟೆ ಕಾಲದಿಂದ ಜೀವನ್ಮರಣದ ನಡುವೆ ಹೋರಾಟ ಮಾಡಿ ಕೊನೆಗೂ ಬದುಕುಳಿದಿದ್ದಾನೆ.
17 ಗಂಟೆಗಳ ಎನ್‌ಡಿಆರ್‌ಎಫ್,ಎಸ್‌ಡಿಆರ್‌ಎಫ್ ಕಾರ್ಯಾಚರಣೆ ಯಶಸ್ವಿಯಾಗಿದೆ. ಪವಾಡ ಎಂಬಂತೆ ಸಾತ್ವಿಕ್ ಬದುಕಿ ಉಳಿದಿದ್ದು ಅಳುತ್ತಿರುವ ಧ್ವನಿ ಕೇಳಿಸಿದೆ. 20 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆಗೆ ಕೊಳವೆಬಾವಿ ಪಕ್ಕದಲ್ಲಿ ಸಮಾನಾಂತರವಾಗಿ 2 ಜೆಸಿಬಿ ಬಳಸಿ ಗುಂಡಿಯನ್ನು ತೋಡಲಾಗಿತ್ತು. ಕೊಳವೆ ಬಾವಿಗೆ ಕ್ಯಾಮೆರಾ ಇಳಿಬಿಟ್ಟು ಬಾಲಕನ ಚಲನವಲನ ಗಮನಿಸಲಾಗುತ್ತಿತ್ತು.
ಸತೀಶ್-ಪೂಜಾ ದಂಪತಿಗೆ ನಾಲ್ಕು ಎಕರೆ ಜಮೀನಿದ್ದು, ನಿಂಬೆ ಮತ್ತು ಕಬ್ಬಿಗೆ ನೀರಿನ ಕೊರತೆ ಎದುರಾಗಿದ್ದ ಹಿನ್ನೆಲೆಯಲ್ಲಿ ಮೊನ್ನೆಯಷ್ಟೇ ಕೊಳವೆ ಬಾವಿ ಕೊರೆಸಿದ್ದರು. ನೀರು ಸಿಕ್ಕಿದ ಹಿನ್ನೆಲೆಯಲ್ಲಿ ಅದನ್ನು ಹಾಗೆಯೇ ಬಿಟ್ಟಿದ್ದರು.