ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ರಾಜ್ಯಾದ್ಯಂತ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಸಂಸ್ಥೆಗಳ 1.40ಲಕ್ಷಕ್ಕೂ ಹೆಚ್ಚು ನೌಕರರು ಶುಕ್ರವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ತಮ್ಮ ಬೇಡಿಕೆ ಈಡೇರದ ಹೊರತು ಮುಷ್ಕರ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಸರ್ಕಾರಿ ಬಸ್‍ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರ ಪರದಾಟ ಮುಂದುವರೆದಿದ್ದು, ಪೊಲೀಸ್ ಭದ್ರತೆಯಲ್ಲಿ ಕೆಲ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರ ನಡೆಸಲಾಗುತ್ತಿದೆ. ಆದರೂ, ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.
ಸರ್ಕಾರ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಮಾಡಿದರೆ ಉಳಿದ 40ಕ್ಕೂ ಹೆಚ್ಚು ನಿಗಮಗಳ ನೌಕರರು ಸಹ ಇದೇ ಬೇಡಿಕೆ ಮುಂದಿಡುತ್ತಾರೆ. ಸರ್ಕಾರಕ್ಕೆ 6000 ಕೋಟಿಗೂ ಹೆಚ್ಚು ಆರ್ಥಿಕ ಹೊರೆ ಬೀಳುತ್ತದೆ. ಹೀಗಾಗಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ, ಸಾರಿಗೆ ನೌಕರರು ತಮ್ಮ ಬಿಗಿಪಟ್ಟು ಮಾತ್ರ ಸಡಿಲಿಸಿಲ್ಲ.
ಕೆಲವೇ ಹೊತ್ತಲ್ಲಿ ಸವದಿ ಮೀಟಿಂಗ್
ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರೆದ ಹಿನ್ನೆಲೆಯಲ್ಲಿ ಕೆಲವೇ ಕ್ಷಣಗಳಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಸಾರಿಗೆ ನೌಕರರ ಜತೆ ಸಭೆ ನಡೆಯಲಿದೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರ ಸಂಘದ ಪದಾಧಿಕಾರಿಗಳು, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಶುಕ್ರವಾರ ನಡೆದ ಸಭೆಯಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ನೌಕರರ ಬೇಡಿಕೆಗಳಿಗೆ ಯಾವುದೇ ಭರವಸೆ ನೀಡದ ಹಿನ್ನೆಲೆಯಲ್ಲಿ ನೌಕರರು ಮುಷ್ಕರ ಮುಂದುವರೆಸಿದ್ದಾರೆ. ಸಾರಿಗೆ ನೌಕರರ ಮುಷ್ಕರ ಮುಂದುವರೆದ ಹಿನ್ನೆಲೆಯಲ್ಲಿ ನಾಳೆಯಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಸವದಿ ನೌಕರರ ಸಭೆ ಕರೆದಿದ್ದಾರೆ.
ಸಭೆಯಲ್ಲಿ ಸರ್ಕಾರ ತನ್ನ ಬಿಗಿಪಟ್ಟು ಮುಂದುವರೆಸುವುದೋ ಅಥವಾ ನೌಕರರು ಮುಷ್ಕರ ವಾಪಸ್ ಪಡೆಯಲು ಸಮ್ಮತಿಸುತ್ತಾರೋ ಎಂಬುದು ನಿರ್ಧಾರವಾಗಲಿದೆ.
ಇದೇ ವೇಳೆ, ತಮ್ಮ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಫ್ರೀಡಂಪಾರ್ಕ್‍ನಲ್ಲಿ ಸಾರಿಗೆ ಇಲಾಖೆಗಳ ನೌಕರರು ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಿದ್ದಾರೆ.
ಖಾಸಗಿ ಬಸ್, ಆಟೋಗಳ ದರ್ಬಾರ್..?
ಸಾರಿಗೆ ನೌಕರರ ಮುಷ್ಕರದಿಂದಾಗಿ ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ಬಸ್‍ಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಹೀಗಾಗಿ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರ ಸುಲಿಗೆಗೆ ನಿಂತಿದ್ದಾರೆ. ಎರಡು ಪಟ್ಟು ಮಾತ್ರವಲ್ಲ, ನಾಲೈದು ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ಕಡಿವಾಣ ಹಾಕಬೇಕಾದ ಆರ್‍ಟಿಒ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಪ್ರಯಾಣಿಕರು ಅರೋಪಿಸಿದ್ದಾರೆ.
ಇನ್ನು ಬೆಂಗಳೂರು ಸೇರಿದಂತೆ ಎಲ್ಲಾ ನಗರಗಳಲ್ಲೂ ಆಟೋ ಚಾಲಕರು ಕೂಡ ಪ್ರಯಾಣಿಕರಿಂದ ವಸೂಲಿಗೆ ನಿಂತಿದ್ದಾರೆ. ಬೇಕಾಬಿಟ್ಟಿ ದರ ಹೇಳಿ ಪ್ರಯಾಣಿಕರನ್ನು ಸುಲಿಗೆಗೆ ನಿಂತಿರುವ ಆಟೋ ಚಾಲಕರ ವಿರುದ್ಧ ಪ್ರಯಾಣಿಕರು ನಿತ್ಯ ಗಲಾಟೆ ನಡೆಸುತ್ತಿರುವ ಸ್ಥಿತಿ ಸಾಮಾನ್ಯವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








