ಉಡುಪಿಯಲ್ಲಿ ಸೋಮವಾರದಿಂದ ಶಾಲೆಗಳು ಓಪನ್ ಆಗಲ್ಲ : ಸುನಿಲ್ ಕುಮಾರ್
ಉಡುಪಿ : ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಇನ್ನೂ ಕಡಿಮೆಯಾಗದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೋಮವಾರದಿಂದ ಶಾಲೆಗಳು ತೆರೆಯುವುದಿಲ್ಲ ಎಂದು ಕನ್ನಡ ಸಂಸ್ಕøತಿ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಇನ್ನೂ ಕಡಿಮೆಯಾಗಿಲ್ಲ.
ಹೀಗಾಗಿ ಜಿಲ್ಲೆಯಲ್ಲಿ ಶಾಲೆಗಳು ಸೋಮವಾರ ತೆರೆಯುವುದಿಲ್ಲ. ಗಡಿಜಿಲ್ಲೆಗಳಲ್ಲಿ ನಂತರ ಶಾಲೆಗಳು ತೆರೆಯುತ್ತದೆ. ಉಳಿದ ಜಿಲ್ಲೆಗಳಲ್ಲಿ ಸೋಮವಾರದಿಂದ ಶಾಲೆಗಳು ಆರಂಭವಾಗುತ್ತದೆ ಎಂದು ತಿಳಿಸಿದರು.
ಪಾಸಿಟಿವಿಟಿ ರೇಟ್ ಕಡಿಮೆ ಆದರೆ ನಮ್ಮ ಜಿಲ್ಲೆಯಲ್ಲಿ ಶಾಲೆಗಳನ್ನು ಪ್ರಾರಂಭ ಮಾಡುತ್ತೇವೆ. ಉಳಿದ ಜಿಲ್ಲೆಯಲ್ಲಿ ಶಾಲೆ ಪ್ರಾರಂಭವಾಗಿದೆ ಎಂಬ ವಾದ ಸರಿಯಲ್ಲ. ಕೊರೊನಾ ಸೋಂಕನ್ನು ಹತೋಟಿಗೆ ತರುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಇನ್ನು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ವಿಚಾರವಾಗಿ ಸಿಎಂ ಮತ್ತು ಗೃಹ ಸಚಿವರು ಬೇರೆಬೇರೆ ಹಂತಗಳಲ್ಲಿ ಸಭೆ ನಡೆಸಿದ್ದಾರೆ.
ಕನ್ನಡಿಗರ ರಕ್ಷಣೆಗೆ ಸರಕಾರ ಗರಿಷ್ಠ ಪ್ರಯತ್ನ ಮಾಡುತ್ತಿದೆ. ರಾಜತಾಂತ್ರಿಕ ವಲಯ ಈ ನಿಟ್ಟಿನಲ್ಲಿ ಸಕ್ರಿಯವಾಗಿದೆ ಎಂದು ಸಚಿವರು ತಿಳಿಸಿದರು.









