ಮೇ 16 ರಿಂದ ಶಾಲೆಗಳು ಪ್ರಾರಂಭ – ಶಿಕ್ಷಣ ಸಚಿವ ಬಿ.ಸಿ. ನಾಗೇಶ್….
ನಿಗದಿಯಂತೆ ಮೇ 16ರಿಂದ ಶಾಲೆಗಳು ಪ್ರಾರಂಭ ಆಗುತ್ತವೆ. ಕೊರೊನಾ ನಾಲ್ಕನೇ ಅಲೆ ಭೀತಿ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಶಾಲೆಗಳನ್ನು ಕ್ಲೋಸ್ ಮಾಡಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನಲೆಯಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರಿದೆ. ಹಾಗಾಗಿ ಮಕ್ಕಳ ಕಲಿಕೆಗೆ ಒತ್ತು ನೀಡಿದ್ದು ಹದಿನೈದು ದಿನದ ಮೊದಲೇ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗಲಿವೆ.
“ಜೂನ್, ಜುಲೈನಲ್ಲಿ 4ನೇ ಅಲೆ ಎಂದು ಹೇಳುತ್ತಿದ್ದಾರೆ. ಈಗಾಗಲೇ ಸಿಎಂ ಕೂಡಾ ಸಭೆ ಮಾಡಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ನಮಗೆ ನೀಡುವ ನಿಯಮಗಳನ್ನು ನಾವು ಕಡ್ಡಾಯವಾಗಿ ಪಾಲನೆ ಮಾಡುತ್ತೇವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಶಾಲೆಗಳು ಕ್ಲೋಸ್ ಮಾಡೊಲ್ಲ” ಎಂದು ಸುದ್ದಿ ಗೋಷ್ಟಿಯಲ್ಲಿ ಶಿಕ್ಷಣ ಸಚಿವರು ಸ್ಪಷ್ಟ ಪಡಿಸಿದ್ದಾರೆ.
12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸರ್ಕಾರದಿಂದ ಉಚಿತ ಲಸಿಕೆ ನೀಡುಲಾಗುತ್ತಿದೆ. ಪರೀಕ್ಷೆಗಳು ನಡೆಯುತ್ತಿರುವುದರಿಂದ ಶಾಲೆಗಳಲ್ಲಿ ಲಸಿಕೆ ಕೊಡೊದು ಸದ್ಯಕ್ಕೆ ನಿಲ್ಲಿಸಲಾಗಿದೆ. ಪರೀಕ್ಷೆಗಳು ಮುಗಿದ ಬಳಿಕ ಶಾಲೆಗಳಲ್ಲಿ ಲಸಿಕೆ ಅಭಿಯಾನ ಮತ್ತೆ ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.