ಮೈಸೂರು : ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣದ ಬಳಿಕ ಎಸ್ ಡಿಪಿಐ ಸಂಘಟನೆ ನಿಷೇಧದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ವಿಚಾರವಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯಿಸಿ, ಎಸ್ ಡಿಪಿಐ ಸಂಘಟನೆಯು ಕಾಂಗ್ರೆಸ್ ಪಕ್ಷದ ಪಾಪದ ಕೂಸು ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆಗಳು ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟದಿಂದ ನಡೆದಿದೆ. ಕಾಂಗ್ರೆಸ್ ಪಕ್ಷ ನಾವಿಕನಿಲ್ಲದ ದೋಣಿಯಂತಾಗಿದೆ. ಹೀಗಾಗಿ ಬಿಜೆಪಿಯ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ ಯಾವುದೇ ನೈತಿಕತೆಯಿಲ್ಲ. ಗಲಭೆಯ ಹಿಂದೆ ಕಾಂಗ್ರೆಸ್ ಪಕ್ಷದ ಪಿತೂರಿಯಿದೆ. ಎಸ್ ಡಿಪಿಐ ಸಂಘಟನೆಯು ಕಾಂಗ್ರೆಸ್ ಪಕ್ಷದ ಪಾಪದ ಕೂಸು. ಅವರು ಬಿತ್ತಿದ ಬೀಜ ಈಗ ಹೆಮ್ಮರವಾಗಿ ಬೆಳೆದಿದೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಗಲಭೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಶಾಸಕನ ಪರ ನಿಲ್ಲಬೇಕೋ ಅಥವಾ ಎಸ್ ಡಿಪಿಐ ಪರ ನಿಲ್ಲಬೇಕೊ ಎಂಬ ಗೊಂದಲದಲ್ಲಿ ಮುಳುಗಿದೆ. ಎಸ್ ಡಿಪಿಐಯನ್ನು ಕಾಂಗ್ರೆಸ್ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಸಿಎಂ ಪುತ್ರ, ಎಸ್ ಡಿಪಿಐ ಕಚೇರಿಗೆ ಪೊಲೀಸರು ಭೇಟಿ ನೀಡಿದಾಗ ಮಾರಕಾಸ್ತ್ರಗಳು ಪತ್ತೆಯಾಗಿವೆ. ಅಲ್ಲಿಯೇ ಗಲಭೆ ನಡೆಸಲು ಸಭೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಇನ್ನಷ್ಟು ತನಿಖೆಯಾಗಬೇಕಿದೆ ಒತ್ತಾಯಿಸಿದರು.








