ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಟೆಲಿಫೋನ್ ಕದ್ದಾಲಿಕೆ ಆರೋಪವಲ್ಲ ಸತ್ಯ ಎಂದಿದ್ದ ಸಂಸದ ಡಿ.ಕೆ ಸುರೇಶ್ ಅವರಿಗೆ ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ನೋಡಿದರೆ ನಗಬೇಕೋ ಅಳಬೇಕೋ ಗೊತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೋಗಿ ಕಾಂಗ್ರೆಸ್ ಈಗ ಬೆತ್ತಲಾಗಿದೆ. ಈಗ ಫೋನ್ ಟ್ಯಾಪಿಂಗ್ ಆರೋಪ ಮಾಡುವ ಮೂಲಕ ತಮ್ಮ ಪಕ್ಷವನ್ನು ಚಾಲ್ತಿಯಲ್ಲಿರಿಸುವ ಯತ್ನವನ್ನು ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ಅವರು ಮಾಡುತ್ತಿದ್ದಾರೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕೆಲಸ ಮಾಡಿದರೆ ನಿಮ್ಮ ಪಕ್ಷಕ್ಕೆ ಒಳಿತು. ಡಿಜೆ ಹಳ್ಳಿ ಪ್ರಕರಣದಲ್ಲಿ ಸತ್ಯ ಜಗಜ್ಜಾಹೀರಾಗಿದೆ. ಸತ್ಯ ಶೋಧನಾ ಸಮಿತಿ ನಿಮಗೆ ಬೇಕಿರಲಿಲ್ಲ. ನಿಮ್ಮ ಪಕ್ಷದ ಅಂತರಂಗ ತಿಳಿಯಲು ಸತ್ಯಶೋಧನಾ ಸಮಿತಿ ಬಳಸಿಕೊಳ್ಳಿ ಎಂದು ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಚ್ಚಾಟದಿಂದ ಗಲಭೆ ಘಟನೆ ನಡೆದಿದೆ. ಇದು ಎಲ್ಲರಿಗೂ ಗೊತ್ತಾಗಿದೆ. ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಅದಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಿಜಯೇಂದ್ರ ಕಿಡಿಕಾರಿದ್ದಾರೆ.