ಕೋಲಾರ: ದೇಶಾದ್ಯಂತ ಮೇ 3ರ ವರೆಗೆ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ನಗರದ ಪ್ರದೇಶದಲ್ಲಿ ಲಾಕ್ ಡೌನ್ ಯಶಸ್ವಿಗೊಳಿಸಲು ಪೊಲೀಸರು ಹಗಲು, ರಾತ್ರಿ ಹರಸಾಹಸ ಪಡುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಹಳ್ಳಿಗೆ ತಾವೇ ಸ್ವಯಂ ನಿರ್ಬಂಧನೆ ಹಾಕಿಕೊಳ್ಳುವ ಮೂಲಕ ಕೋಲಾರ ಜಿಲ್ಲೆಯ ಚನ್ನಸಂದ್ರ ಗ್ರಾಮಸ್ಥರು ಎಲ್ಲರಿಗೂ ಮಾದರಿಯಾಗಿದ್ದಾರೆ. ಹೌದು, ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಇದನ್ನು ಗ್ರಾಮದ ಮುಖಂಡರೇ ಸಭೆ ನಡೆಸಿ ತೀರ್ಮಾನ ಮಾಡಿದ್ದಾರೆ. ಇದರ ಜತೆಗೆ ತಮ್ಮ ಗ್ರಾಮದ ಜನರ ಆರೋಗ್ಯ ರಕ್ಷಣೆಗೆ ತಾವೇ ಅನೇಕ ಷರತ್ತುಗಳನ್ನು ಸಹ ಹಾಕಿಕೊಂಡಿದ್ದಾರೆ.
ಚನ್ನಸಂದ್ರ ಗ್ರಾಮಕ್ಕೆ ಯಾವೊಬ್ಬ ಅಪರಿಚಿತ ವ್ಯಕ್ತಿಗೆ ಪ್ರವೇಶ ಇಲ್ಲ. ಗ್ರಾಮದಿಂದ ಹೊರ ಹೋಗಬೇಕು ಅಂದರೆ ಅವರಿಗೆ ಮಾಸ್ಕ್ ಕಡ್ಡಾಯ. ಈ ಬಗ್ಗೆ ಯಾರೊಬ್ಬರ ಜತೆಗೆ ತಕರಾರು ಮಾಡಿದರೂ ಪೊಲೀಸರಿಗೆ ಗಮನಕ್ಕೆ ತರುತ್ತಾರೆ. ಇನ್ನು ಚೆಕ್ ಪೋಸ್ಟ್ ಗೆ ಗ್ರಾಮದ ಯುವಕರು ಮೂರು ಸರದಿಯಲ್ಲಿ ಕೆಲಸ ಮಾಡುತ್ತಾರೆ. ಹೀಗೆ ತಮ್ಮ ಗ್ರಾಮದ ರಕ್ಷಣೆಗೆ ತಾವೇ ಜನತಾ ಕರ್ಫ್ಯೂ ವಿಧಿಸಿಕೊಂಡಿದ್ದಾರೆ.
ಒಟ್ಟಾರೆ ನಗರ ಪ್ರದೇಶದಲ್ಲಿ ಲಾಕ್ ಡೌನ್ ಯಶಸ್ವಿ ಮಾಡಲು ಪೊಲೀಸರು ಹಗಲು, ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಈ ಗ್ರಾಮದ ಜನರು ಸ್ವತಃ ತಾವೇ ಜತನಾ ಕರ್ಫ್ಯೂ ವಿಧಿಸಿಕೊಂಡು ಮಾದರಿಯಾಗಿದ್ದಾರೆ.








