ಬೆಂಗಳೂರು: ಹಣದ ಆಸೆಗಾಗಿ ಪತಿ- ಪತ್ನಿ, ಪ್ರೇಮಿಗಳ ಕಾಲ್ ಡಿಟೈಲ್ಸ್‌ಗಳನ್ನು (Call Details) ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ ಹಾಗೂ ಪ್ರೈವೆಟ್ ಡಿಟೆಕ್ಟೀವ್ ಏಜೆನ್ಸಿಯ ಕಿಂಗ್‌ಪಿನ್ ನನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪುರುಷೋತ್ತಮ ಕುಮಾರ್, ತಿಪ್ಪೇಸ್ವಾಮಿ, ಮಹಾಂತಗೌಡ, ರೇವಂತ, ಗುರುಪಾದಸ್ವಾಮಿ, ಶ್ರೀನಿವಾಸ ಮತ್ತು ಭರತ್ ಎಂಬುವವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು.
ಈಗ ಪ್ರಕರಣದ ಕಿಂಗ್ ಪಿನ್ ಆಂಧ್ರದ ಪುಲಿವೆಂದುಲು ಮೂಲದ ನಾಗೇಶ್ವರ ರೆಡ್ಡಿ ಹಾಗೂ ರೆಡ್ಡಿಗೆ ಸಿಡಿಆರ್ ನೀಡುತ್ತಿದ್ದ ಸಿಐಡಿ ಪೊಲೀಸ್ ಸಿಬ್ಬಂದಿ ಮುನಿರತ್ನ ಎಂಬಾತನನ್ನು ಬಂಧಿಸಲಾಗಿದೆ. ಮುನಿರತ್ನ ಹಲವು ವರ್ಷಗಳಿಂದ ಸಿಐಡಿ ಟೆಕ್ನಿಕಲ್ ಸೆಲ್ ನಲ್ಲಿ ಕೆಲಸ ಮಾಡುತ್ತಿದ್ದ. ಹಿರಿಯ ಅಧಿಕಾರಿಗಳು ಕೇಸ್ ಸಂಬಂಧ ಅಧಿಕೃತವಾಗಿ ಸಿಡಿಆರ್ ಪಡೆಯಲು ಸರ್ವಿಸ್ ಪ್ರೊವೈಡರ್ ಗಳಿಗೆ ನೀಡುವ ಪತ್ರದಲ್ಲಿ ತನಗೆ ಬೇಕಾದ ಫೋನ್ ನಂಬರ್ ಗಳನ್ನು ಸೇರಿಸಿ ಸಿಡಿಆರ್ ಪಡೆದು ಹಣಕ್ಕಾಗಿ ನಾಗೇಶ್ವರ್ ರಾವ್ ಗೆ ಮಾರುತ್ತಿದ್ದ ಎನ್ನಲಾಗಿದೆ.
ಪತಿ-ಪತ್ನಿ ಹಾಗೂ ಪ್ರೇಮಿಗಳ ನಡುವಿನ ಅನುಮಾನ ಪಟ್ಟವರು ಇವರನ್ನು ಸಂಪರ್ಕಿಸಿ ಕಾಲ್ ಡಿಟೇಲ್ಸ್ ಪಡೆಯುತ್ತಿದ್ದರು ಎನ್ನಲಾಗಿದೆ. ಅಲ್ಲದೇ, ವ್ಯಾಪಾರಸ್ಥರು ಹಾಗೂ ರಾಜಕೀಯ ವ್ಯಕ್ತಿಗಳು ಕೂಡ ಇವರಿಂದ ಸಿಡಿಆರ್ ಪಡೆದಿರುವ ಸಾಧ್ಯತೆ ಇದೆ. ಕೆಲವು ಪೊಲೀಸ್ ಅಧಿಕಾರಿಗಳ ಪತ್ನಿಯರೂ ಈ ಕಾಲ್ ಡಿಟೇಲ್ಸ್ ಪಡೆದಿದ್ದಾರೆ ಎನ್ನಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.