ಫ್ರೆಂಚ್ ಓಪನ್ 2021 – ಸೆರೆನಾ ವಿಲಿಯಮ್ಸ್ಗೆ ಆಘಾತ… ನನಸಾಗಲಿಲ್ಲ ಕಂಡ ಕನಸು..!
ಚಾಂಪಿಯನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ದಾಖಲೆಯ 24ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲುವ ಕನಸು ಮತ್ತೆ ಕನಸಾಗಿಯೇ ಉಳಿದಿದೆ. ಪ್ರತಿಷ್ಠಿತ 2021ನೇ ಸಾಲಿನ ಫ್ರೆಂಚ್ ಓಪನ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಆಘಾತ ಅನುಭವಿಸಿದ್ದಾರೆ. ಈ ಮೂಲಕ ಟೂರ್ನಿಯಿಂದ ಹೊರನಡೆದಿರುವ ಸೆರೆನಾ ವಿಲಿಯಮ್ಸ್ ದಾಖಲೆಯ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲಲು ಮುಂದೆ ವಿಂಬಲ್ಡನ್ ಟೂರ್ನಿಯಲ್ಲಿ ಆಡಬೇಕಾಗುತ್ತದೆ.
ಪ್ಯಾರಿಸ್ ನ ರೋಲ್ಯಾಂಡ್ ಗ್ಯಾರೋಸ್ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ ಅವರು 6-3, 7-5ರಿಂದ ಎಲೆನಾ ರೈಬಾಕಿನಾ ವಿರುದ್ಧ ಸೋಲು ಅನುಭವಿಸಿದ್ರು.
21ರ ಹರೆಯದ ರೈಬಾಕಿನಾ ಅವರು ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಯ ಏಳನೇ ಪಂದ್ಯವನ್ನಾಡುತ್ತಿದ್ದು, ಅನುಭವಿ ಸೆರೆನಾ ವಿಲಿಯಮ್ಸ್ ಅವರ ಅಬ್ಬರಕ್ಕೆ ಕಡಿವಾಣ ಹಾಕಲು ಯಶಸ್ವಿಯಾದ್ರು. 2017ರ ಆಸ್ಟ್ರೇಲಿಯನ್ ಓಪನ್ ಗೆಲುವಿನ ನಂತರ ಸೆರೆನಾ ವಿಲಿಯಮ್ಸ್ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯನ್ನು ಗೆದ್ದುಕೊಂಡಿಲ್ಲ. ಸದ್ಯ 23 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದಿರುವ ಸೆರೆನಾ ವಿಲಿಯಮ್ಸ್ ಅವರು ಮಾರ್ಗರೇಟ್ ಕೋರ್ಟ್ ಅವರ 24 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯ ದಾಖಲೆಯನ್ನು ಸಮಗೊಳಿಸಲು ಕಳೆದ ನಾಲ್ಕು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದ್ರೆ ಸೆರೆನಾಗೆ ಇತ್ತೀಚಿನ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಗಳಲ್ಲಿ ಪದೇ ಪದೇ ನಿರಾಸೆ ಅನುಭವಿಸುತ್ತಿದ್ದಾರೆ.
ಸೆರೆನಾ ವಿಲಿಯಮ್ಸ್ ಅವರು ಏಳು ಬಾರಿ ಆಸ್ಟ್ರೇಲಿಯನ್ ಓಪನ್, ಮೂರು ಬಾರಿ ಫ್ರೆಂಚ್ ಓಪನ್, ಏಳು ಬಾರಿ ವಿಂಬಲ್ಡನ್ ಮತ್ತು ಆರು ಆರಿ ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇನ್ನು, ಡಬಲ್ಸ್ ನಲ್ಲಿ ನಾಲ್ಕು ಬಾರಿ ಆಸ್ಟ್ರೇಲಿಯನ್ ಓಪನ್, ಎರಡು ಬಾರಿ ಫ್ರೆಂಚ್ ಓಪನ್, ಆರು ಬಾರಿ ವಿಂಬಲ್ಡನ್ ಮತ್ತು ಎರಡು ಬಾರಿ ಯುಎಸ್ ಓಪನ್ ಕಿರೀಟಗಳನ್ನು ತನ್ನ ಅಕ್ಕ ವೀನಸ್ ಜೊತೆ ಸೇರಿಕೊಂಡು ಸೆರೆನಾ ಗೆದ್ದಿದ್ದಾರೆ. ಅಷ್ಟೇ ಅಲ್ಲ, ಮಿಕ್ಸೆಡ್ ಡಬಲ್ಸ್ ನಲ್ಲಿ ನಾಲ್ಕು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ತಲಾ ಒಂದೊಂದು ಬಾರಿ ಗೆದ್ದಿದ್ದಾರೆ .
ಹೀಗೆ ಸೆರೆನಾ ವಿಲಿಯಮ್ಸ್ ಅವರು 23 ಸಿಂಗಲ್ಸ್ ಗ್ರ್ಯಾಂಡ್ ಸ್ಲ್ಯಾಂ, 14 ಡಬಲ್ಸ್ ಗ್ರ್ಯಾಂಡ್ ಸ್ಲ್ಯಾಂ ಮತ್ತು ನಾಲ್ಕು ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ ಹೀಗೆ ಒಟ್ಟು 41 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
ಒಟ್ಟಿನಲ್ಲಿ ಸೆರೆನಾ ವಿಲಿಯಮ್ಸ್ ಅವರು ನಿರಾಸೆ ಅನುಭವಿಸಿದ್ದು, ಮುಂದಿನ ವಿಂಬಲ್ಡನ್ ಟೂರ್ನಿಯತ್ತ ಚಿತ್ತವನ್ನಿಟ್ಟಿದ್ದಾರೆ.