ಮಂಗಳೂರು : ಅಪ್ರಾಪ್ತ ಮಲ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಮಂಗಳೂರಿನ (Mangaluru) ಪೋಸ್ಕೋ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಆರೋಪಿಯ ವಿರುದ್ಧ ಸಂತ್ರಸ್ತೆಯ ಚಿಕ್ಕಮ್ಮ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಳೆದ ವರ್ಷ ಆರೋಪಿ ಮಲ ತಂದೆ ಅಶ್ವಥ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಅಶ್ವಥ್, ಮಲ್ಲಿಕಾ ಅಲಿಯಾಸ್ ರಾಜೀವಿಯ ಎರಡನೇ ಪತಿಯಾಗಿದ್ದ. ಮಲ್ಲಿಕಾಗೆ ಮೊದಲ ಪತಿಯಿಂದ ಹೆಣ್ಣು ಮಗು ಹುಟ್ಟಿತ್ತು. ಆದರೆ ಅಶ್ವಥ್, ಅಪ್ರಾಪ್ತ ಮಲ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಅಲ್ಲದೆ, ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ನಂತರ ಸಂತ್ರಸ್ತೆಯು ತನ್ನ ಚಿಕ್ಕಮ್ಮನ ಬಳಿ ಈ ವಿಚಾರ ಹೇಳಿಕೊಂಡಿದ್ದಾಳೆ. ಆನಂತರ ಮಂಗಳೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೂಡಲೇ ಪೊಲೀಸರು, ಸಂತ್ರಸ್ತೆ ಮತ್ತು ಆರೋಪಿಯ ತನಿಖೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಪೂರ್ಣಗೊಳಿಸಿ ಪೋಕ್ಸೋ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು ದೋಷಿ ಎಂದು ಘೋಷಿಸಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.








