ವಸತಿಶಾಲೆಯ ಶಿಕ್ಷಕರಿಂದಲೇ ಲೈಂಗಿಕ ದೌರ್ಜನ್ಯ – ಪೋಕ್ಸೋ ಕಾಯ್ದೆಯಡಿ ದೂರು
ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಸತಿ ಶಾಲೆಯ ಪ್ರಾಚಾರ್ಯ ಮತ್ತು ಕಂಪ್ಯೂಟರ್ ಆಪರೇಟರ್ ವಿರುದ್ಧ ಪೋಷಕರು ಮತ್ತು ವಿದ್ಯಾರ್ಥಿನಿಯರು ದೂರು ಸಲ್ಲಿಸಿರುವ ಘಟನೆ ಕಲ್ಬುರ್ಗಿ ತಾಲೂಕಿನ ಚಿಂಚೊಳ್ಳಿಯಲ್ಲಿ ನಡೆದಿದೆ.
ಮೈ ಕೈ ಮುಟ್ಟುವುದು, ಮಲಗಿರುವಾಗ ಕಿಟಕಿಗಳಿಂದ ಇಣುಕಿ ನೋಡುವುದು, ಅಸಭ್ಯವಾಗಿ ವರ್ತಿಸುವುದು, ಅಶ್ಲೀಲವಾಗಿ ಮಾತನಾಡುವುದು ಸೇರಿದಂತೆ ಹಲವು ರೀತಿಯಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಚಿಂಚೊಳ್ಳಿ ವಸತಿ ಶಾಲೆಯ ಹೆಣ್ಣು ಮಕ್ಕಳು ಆರೋಪಿಸಿದ್ದಾರೆ. ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದ ಪೋಷಕರು ವಸತಿ ಶಾಲೆಗೆ ಬಂದು ಕೈಗೆ ಸಿಕ್ಕ ಕಂಪ್ಯೂಟರ್ ಆಪರೇಟರ್ನನ್ನು ಹಿಡಿದು ಥಳಿಸಿದ್ದಾರೆ.
ವಿದ್ಯಾರ್ಥಿನಿಯರು ನೀಡಿರುವ ದೂರು ಆಧರಿಸಿ ಚಿಂಚೋಳಿ ತಾಲ್ಲೂಕು ಕುಂಚಾವರಂ ಠಾಣೆ ಪೊಲೀಸರು ಪ್ರಾಚಾರ್ಯ ಸೇರಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇಬ್ಬರ ವಿರುದ್ಧವೂ ಪೊಕ್ಸೊ, ಅಟ್ರಾಸಿಟಿ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಚಿಂಚೋಳಿ ತಹಶಿಲ್ದಾರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಕಲಬುರಗಿ ಎಸ್ಪಿ ಇಶಾ ಪಂತ್ ಸೇರಿದಂತೆ ಅನೇಕ ಅಧಿಕಾರಿಗಳು ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳಿಗೆ ಕೌನ್ಸಲಿಂಗ್ ಮಾಡಿ ಧೈರ್ಯ ಹೇಳಿದ್ದಾರೆ.








