ಆನಂದ್ ಆಡಿಯೋ ಮಡಿಲಿಗೆ “ಶಂಭೋ ಶಿವ ಶಂಕರ” ಚಿತ್ರದ ಹಾಡುಗಳು..!
ಬೆಂಗಳೂರು : ವರ್ತೂರು ಮಂಜು ನಿರ್ಮಾಣದ ಹೊಸಬರಿಂದಲೇ ಮೂಡಿಬರುತ್ತಿರುವ “ ಶಂಭೋ ಶಿವ ಶಂಕರ” ಚಿತ್ರದ ಹಾಡುಗಳ ಹಕ್ಕು ಉತ್ತಮ ಮೊತ್ತಕ್ಕೆ ಆನಂದ್ ಆಡಿಯೋಗೆ ಮಾರಾಟವಾಗಿದೆ. ಶಂಕರ್ ಕೋನಮಾನಹಳ್ಳಿ ನಿರ್ದೇಶನದ “ಶಂಭೋ ಶಿವ ಶಂಕರ” ಚಿತ್ರದ ಆಡಿಯೋ ಹಕ್ಕನ್ನ ಖ್ಯಾತ ಆಡಿಯೋ ಸಂಸ್ಥೆ ಆನಂದ್ ಆಡಿಯೋ ಉತ್ತಮ ಮೊತ್ತ ನೀಡಿ ಖರೀದಿಸಿದೆ.
ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಹಾಗೂ ತಂತ್ರಜ್ಞರೆಲ್ಲಾ ಹೊಸಬರೇ ಆಗಿದ್ದಾರೆ. ಹೊಸತಂಡದ ಈ ಪ್ರಯತ್ನಕ್ಕೆ ಆನಂದ್ ಆಡಿಯೋದಿಂದ ಉತ್ತಮ ಬೆಂಬಲ ಸಿಕ್ಕಿರುವುದಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ. ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಎರಡು ಬಿಟ್ ಗಳಿದೆ. ಗೌಸ್ ಫಿರ್ ಹಾಡುಗಳನ್ನು ಹಾಗೂ ಬಿಟ್ ಗಳನ್ನು ಶಂಕರ್ ಕೋನಮಾನಹಳ್ಳಿ ಬರೆದಿದ್ದಾರೆ. ಹಿತನ್ ಹಾಸನ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಧರ್ಮವಿಶ್ ಅವರದು.
ನವೆಂಬರ್ 15ರಂದು ಒಂದು ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಲಿದೆ. ಸದ್ಯದಲ್ಲೇ ಆಡಿಯೋ ರಿಲೀಸ್ ಸಮಾರಂಭ ನಡೆಯಲಿದೆ. ಒಂದು ಹಾಡಿನ ಚಿತ್ರೀಕರಣ ಮುಗಿದರೆ ಚಿತ್ರ ಸಂಪೂರ್ಣವಾಗಲಿದೆ. ಶಂಕರ್ ಕೋನಮಾನಹಳ್ಳಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ನಟರಾಜ್ ಮುದ್ದಾಲ ಛಾಯಾಗ್ರಹಣ, ಕಲೈ ನೃತ್ಯ ನಿರ್ದೇಶನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ವೆಂಕಟೇಶ್ ಯುಡಿವಿ ಅವರ ಸಂಕಲವಿದೆ.
‘ಶಂಭೋ ಶಿವ ಶಂಕರ’ ಮೂರು ನಾಯಕ ಪಾತ್ರಗಳ ಹೆಸರಾಗಿದ್ದು, ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ಈ ಮೂರು ಪಾತ್ರಗಳಲ್ಲಿ ಕಾಣಿಸಿಕೊಳುತ್ತಿದ್ದಾರೆ. ಸುಪ್ರಿಂ ಹೀರೋ ಶಶಿಕುಮಾರ್, ಸೋನಾಲ್ ಮಾಂಟೆರೊ, ಜೊಗಿ ನಾಗರಾಜ್, ಪ್ರದೀಪ್ ತಿಪಟೂರು, ಆಶಾ ಸುಜಯ್, ಪ್ರೇಮ, ರೋಹಿಣಿ, ಸಂಗಮೇಶ್’, ಡಿ.ಸಿ.ತಮ್ಮಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.