ಬೆಂಗಳೂರು: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ (Chief Secretary) ಶಾಲಿನಿ ರಜನೀಶ್ (Shalini Rajneesh) ನೇಮಕಗೊಂಡಿದ್ದಾರೆ.
ಶುಕ್ರವಾರ (ಜು.26) ನಡೆದ ಕ್ಯಾಬಿನೆಟ್ ಸಭೆಯಲ್ಲಿ ರಜನೀಶ್ ಗೋಯಲ್ ಅವರಿಂದ ತೆರುವಾಗಿರುವ ಸ್ಥಾನಕ್ಕೆ ರಜನೀಶ್ ಗೊಯಲ್ ಅವರ ಪತ್ನಿಯನ್ನು ನೇಮಕ ಮಾಡಿ ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ.
ಇದೇ ಜುಲೈ 31ಕ್ಕೆ ಹಾಲಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ (Rajneesh Goel) ಅವರು ನಿವೃತ್ತಿ ಹೊಂದಲಿದ್ದಾರೆ. ಹೀಗಾಗಿ ನಂತರ ತೆರವಾಗುವ ಸ್ಥಾನಕ್ಕೆ ರಜನೀಶ್ ಗೋಯಲ್ ಅವರ ಪತ್ನಿಯೂ ಆಗಿರುವ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರನ್ನು ನೇಮಕ ಮಾಡಲಾಗಿದೆ.
ಆಗಸ್ಟ್ 1 ರಿಂದ ಶಾಲಿನಿ ರಜನೀಶ್ ಮುಖ್ಯಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 1989ರ ಬ್ಯಾಚ್ ನ ಐಎಎಸ್ ಅಧಿಕಾರಿ ಆಗಿರುವ ಶಾಲಿನಿ ಅವರ ಸೇವಾವಧಿ 2027ರ ಜೂನ್ 30ರ ವರೆಗೆ ಇರಲಿದೆ. ಅಲ್ಲದೇ, ಅವರಿಗೆ ಮೂರು ವರ್ಷಗಳ ಕಾಲ ದೀರ್ಘಾವಧಿ ಸೇವೆಯಲ್ಲಿ ಮುಂದುವರಿಯಲು ಅವಕಾಶ ಕೂಡ ಕಲ್ಪಿಸಲಾಗಿದೆ.
ಹಿಂದೆ 2000ನೇ ಇಸ್ವಿಯಲ್ಲಿ ಬಿ.ಕೆ ಭಟ್ಟಾಚಾರ್ಯ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2002ರ ಅವಧಿಯಲ್ಲಿ ಅವರ ಪತ್ನಿ ತೆರೆಸಾ ಭಟ್ಟಾಚಾರ್ಯ ಸಿಎಸ್ ಆಗಿ ಸೇವೆ ಸಲ್ಲಿಸಿದ್ದರು. ಈ ಮೂಲಕ ಕರ್ನಾಟಕದಲ್ಲಿ ಸಿಎ ಆಗಿ ಸೇವೆ ಸಲ್ಲಿಸಿದ್ದ ಮೊಟ್ಟ ಮೊದಲ ದಂಪತಿಯಾಗಿದ್ದರು. ಈಗ ರಜನೀಶ್ ಗೋಯಲ್ ಮತ್ತು ಶಾಲಿನಿ ರಜನೀಶ್ ಮುಖ್ಯಕಾರ್ಯದರ್ಶಿಗಳಾಗಿರುವ 2ನೇ ದಂಪತಿಗಳಾಗಿದ್ದಾರೆ.








