ಢಾಕಾ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನ ಮಾಡಿದರೂ ಅಲ್ಲಿ ಶಾಂತಿ ನೆಲೆಸುತ್ತಿಲ್ಲ. ಈ ಮಧ್ಯೆ ಈಗ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ಗ್ರಾಮೀಣ ಬ್ಯಾಂಕ್ ಸ್ಥಾಪಿಸಿದ್ದ ಮೊಹಮ್ಮದ್ ಯೂನುಸ್ (Muhammad Yunus) ಅವರನ್ನು ಬಾಂಗ್ಲಾದೇಶ (Bangladesh) ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.
ಸಂಸತ್ತನ್ನು ವಿಸರ್ಜಿಸಿದ ಬೆನ್ನಲ್ಲೇ ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನುಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ. ಸಂಸತ್ತು ವಿಸರ್ಜಿಸಿದ ನಂತರ ಶಹಾಬುದ್ದೀನ್ ಅವರು ರಕ್ಷಣಾ ಪಡೆಯ ಮೂರೂ ವಿಭಾಗಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಚಳವಳಿಯ (Student Protest) 13 ಸದಸ್ಯರೊಂದಿಗೆ ಮಧ್ಯಂತರ ಸರ್ಕಾರದ ರಚಿಸುವ ಕುರಿತು ಚರ್ಚೆ ನಡೆಸಿದ್ದರು. ಈ ಸಂದರ್ಭದಲ್ಲಿ ಯೂನುಸ್ ಅವರಿಗೆ ಅಧಿಕಾರ ನೀಡಬೇಕೆಂದು ವಿದ್ಯಾರ್ಥಿಗಳ ಆಗ್ರಹಿಸಿದ್ದಾರೆ ಎಂದು ವಿದ್ಯಾರ್ಥಿ ನಾಯಕ ನಹೀದ್ ಇಸ್ಲಾಂ ಹೇಳಿದ್ದರು.
ವಿವಿಧ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಿದ ನಂತರ ಮಧ್ಯಂತರ ಸರ್ಕಾರದ ಇನ್ನಿತರ ಸದಸ್ಯರನ್ನು ಅಂತಿಮಗೊಳಿಸಲಾಗುವುದು ಎಂದು ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ಜಾಯ್ನಲ್ ಅಬೆದಿನ್ ಹೇಳಿದ್ದಾರೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಯೂನುಸ್ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದರು. ವಿದ್ಯಾರ್ಥಿಗಳ ಮನವಿಯನ್ನು ಸೋಮವಾರ ಯೂನುಸ್ ಪುರಸ್ಕರಿಸಿದ್ದರು. ಈಗ ಮಧ್ಯಂತರ ಸರ್ಕಾರದ ಹೊಣೆ ಹೊರುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ.