ಬೆಂಗಳೂರು : ಅವಧೂತ ವಿನಯ್ ಗುರೂಜಿ ಪ್ರಸಾದ ಎಂದು ವಿತರಿಸಿ ಬಲವಂತವಾಗಿ ಎಂಜಲು ತಿನ್ನುವಂತೆ ಮಾಡಿದರು ಎಂಬ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಆರೋಪಕ್ಕೆ ಮಾಜಿ ಎಂಎಲ್ ಸಿ ಟಿ.ಎ.ಶರವಣ, ಗುರುಗಳಲ್ಲಿ ನಾವು ಭಗವಂತನನ್ನು ಕಾಣುವುದರಿಂದ ಅವರು ಸೇವಿಸಿದ ಆಹಾರ ಪ್ರಸಾದವೆಂದು ಭಾವಿಸುತ್ತೇವೆ ಎಂದು ಫೇಸ್ ಬುಕ್ ಪೋಸ್ಟ್ ಹಾಕುವ ಮೂಲಕ ಟಾಂಗ್ ನೀಡಿದ್ದಾರೆ.
ಶರವಣ ಪೋಸ್ಟ್ ನಲ್ಲಿ…
ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಾದ ಶ್ರೀ ರಘು ಆಚಾರ್ ಅವರ ಹೇಳಿಕೆ ನನ್ನ ಗಮನಕ್ಕೆ ಬಂದಿದೆ. ಅವಧೂತ ವಿನಯ್ ಗುರೂಜಿಯವರ ಅಪಾರ ಶಿಷ್ಯವೃಂದದಲ್ಲಿ ನಾನು ಒಬ್ಬ ಭಕ್ತ. ಮೊದಲನೆಯದಾಗಿ ಧಾರ್ಮಿಕ ನಂಬಿಕೆಗಳು ಜನರ ವೈಯಕ್ತಿಕ ವಿಚಾರಕ್ಕೆ ಮತ್ತು ಅವರವರ ಭಾವನೆಗೆ ಒಳಪಟ್ಟಿರುತ್ತದೆ. ಗುರುಗಳಲ್ಲಿ ನಾವು ಭಗವಂತನನ್ನು ಕಾಣುವುದರಿಂದ ಅವರು ಸೇವಿಸಿದ ಆಹಾರ ಪ್ರಸಾದವೆಂದು ಭಾವಿಸುತ್ತೇವೆ. ಗುರುಗಳು ಯಾರಿಗೂ ಕೂಡ ಸೇವಿಸಲು ಒತ್ತಾಯ ಮಾಡಿಲ್ಲ ಹಾಗೂ ನಿಮಗೂ ಕೂಡ ಬಲವಂತವಾಗಿ ತಿಳಿಸಿಲ್ಲ.
ನಂಬಿಕೆ ಇರುವವರು ಅದನ್ನು ಪ್ರಸಾದವೆಂದು ಸ್ವೀಕರಿಸುತ್ತಾರೆ. ನೀವು ಕೇವಲ ಪ್ರಚಾರಕ್ಕಾಗಿ ವ್ಯಕ್ತಿಯ ನಂಬಿಕೆಯ ವಿಚಾರವನ್ನು ಬಹಿರಂಗವಾಗಿ ಚರ್ಚಿಸುವುದು ಸರಿಯಲ್ಲ. ಇನ್ನು ನಮ್ಮ ಆರೋಗ್ಯದ ಬಗ್ಗೆ ಖಂಡಿತವಾಗಿ ಕಾಳಜಿ ಬೇಡ, ಗುರುಗಳು ಆರೋಗ್ಯದಿಂದ ಇದ್ದಾರೆ. ಹಾಗಾಗಿ ನಮಗೇನೂ ತೊಂದರೆ ಇಲ್ಲ. ನಮ್ಮ ಆಚಾರ-ವಿಚಾರಗಳ ಬಗ್ಗೆ, ನಂಬಿಕೆಗಳ ಬಗ್ಗೆ, ಕೆಲವರು ಓಲೈಕೆಗಾಗಿ ಕೆಟ್ಟದಾಗಿ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಹಾಗಾಗಿ ಇಂತಹ ವಿಚಾರಗಳನ್ನು ಪ್ರಚಾರಕ್ಕಾಗಿ ಈ ತರಹದ ಮಾತುಗಳನ್ನು ನಿಲ್ಲಿಸಿ.
ನಿಮಗೇನಾದರೂ ವಿನಯ್ ಗುರೂಜಿ ರವರ ಬಗ್ಗೆ ಮಾಹಿತಿ ಗೊತ್ತಿಲ್ಲ ಎಂದರೆ ನಿಮ್ಮ ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ನಾಯಕರನ್ನು ಕೇಳಿ ತಿಳಿದು ಮಾತನಾಡಿ. ನೀವು ಗುರುಗಳ ಬಗ್ಗೆ ಇತರ ಹಗುರವಾಗಿ ಮಾತನಾಡಿರುವುದು ನನ್ನ ಮನಸ್ಸಿಗೆ ನೋವಾಗಿದೆ. ಇದು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ” ಎಂದು ರಘು ಆಚಾರ್ ವಿರುದ್ಧ ಕಿಡಿಕಾರಿದ್ದಾರೆ.