ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಶಿಖರ್ ಧವನ್ (Shikhar Dhawan) ದೇಶೀಯ ಸೇರಿದಂತೆ ಎಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
38 ವರ್ಷದ ಶಿಖರ್ ಧವನ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ನಿವೃತ್ತಿ ಘೋಷಿಸಿದ್ದಾರೆ. ನನ್ನ ಕುಟುಂಬ, ನನ್ನ ಬಾಲ್ಯದ ಕೋಚ್ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ನಾನು ಕ್ರಿಕೆಟ್ ಕಲಿತಿದ್ದೇನೆ. ಭಾರತ ತಂಡವನ್ನು ಸೇರಬೇಕು ಎನ್ನುವುದು ನನ್ನ ಗುರಿಯಾಗಿತ್ತು. ಸೇರಿದ ನಂತರ ಇಡೀ ತಂಡ, ಕುಟುಂಬ, ಅಭಿಮಾನಿಗಳಿಂದ ಬೆಂಬಲ ಸಿಕ್ಕಿತು. ಆದರೆ, ಈಗ ವಿದಾಯ ಹೇಳುವ ಸಂದರ್ಭ ಬಂದಿದೆ ಎಂದು ಹೇಳಿದ್ದಾರೆ.
ದೇಶಕ್ಕಾಗಿ ಆಡಿರುವ ತೃಪ್ತಿ ನನಗಿದೆ. ನನಗೆ ಈ ಅವಕಾಶವನ್ನು ನೀಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (DDCI) ಮತ್ತು ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.
2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಏಕದಿನಕ್ಕೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಶಿಖರ್ ಧವನ್ 2021ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. 167 ಏಕದಿನ ಪಂದ್ಯಗಳ ಮೂಲಕ 6,793 ರನ್ ಗಳಿಸಿದ್ದಾರೆ. 34 ಟೆಸ್ಟ್ ಪಂದ್ಯಗಳ ಮೂಲಕ 2,315 ರನ್ ಗಳಿಸಿದ್ದಾರೆ. 68 ಟಿ20 ಪಂದ್ಯಗಳಿಂದ 1,759 ರನ್ ಗಳಿಸಿದ್ದಾರೆ.
ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್, ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದಾರೆ. ಈಗ ಪಂಜಾಬ್ ತಂಡದ ನಾಯಕರಾಗಿದ್ದಾರೆ. ಆದರೆ, ಹರಾಜು ಪ್ರಕ್ರಿಯೆಯಲ್ಲಿ ತಂಡ ಅವರನ್ನು ಉಳಿಸಿಕೊಳ್ಳಲಿದೆಯೇ ನೋಡಬೇಕಿದೆ. ಇತ್ತೀಚೆಗಷ್ಟೇ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು.







