Shikhar Dhawan : ಏಕದಿನ ವಿಶ್ವಕಪ್ ನನ್ನ ಟಾರ್ಗೆಟ್
ಟೀಂ ಇಂಡಿಯಾದ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಸದ್ಯ ಏಕದಿನ ಪಂದ್ಯಗಳಿಗೆ ಮಾತ್ರ ಸೀಮಿತವಾಗಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡುವ ಬಯಕೆಯನ್ನು ಧವನ್ ಇತ್ತೀಚೆಗೆ ವ್ಯಕ್ತಪಡಿಸಿದ್ದಾರೆ.
ಇದಕ್ಕಾಗಿ ತಮ್ಮ ಫಿಟ್ನೆಸ್ ಹಾಗೂ ಆಟದ ಬಗ್ಗೆ ವಿಶೇಷ ಗಮನ ಹರಿಸುತ್ತಿರುವುದಾಗಿ ಧವನ್ ಹೇಳಿದ್ದಾರೆ. ಮುಂದಿನ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ.
ಟೈಮ್ಸ್ ಇಂಡಿಯಾದೊಂದಿಗೆ ಮಾತನಾಡಿದ ಧವನ್, “ನಾನು ಐಸಿಸಿ ಪಂದ್ಯಾವಳಿಗಳಲ್ಲಿ ಆಡುವುದನ್ನು ಇಷ್ಟಪಡುತ್ತೇನೆ.
ಮೆಗಾ ಪಂದ್ಯಾವಳಿಗಳಲ್ಲಿ ಆಡುವುದು ನನಗೆ ವಿಶೇಷ ಭಾವನೆಯನ್ನು ನೀಡುತ್ತದೆ. ನಾನು ಈ ಹಿಂದೆ ಅನೇಕ ಐಸಿಸಿ ಪಂದ್ಯಾವಳಿಗಳಲ್ಲಿ ಭಾಗವಾಗಿದ್ದೇನೆ.

ಅನುಭವಿ ಆಟಗಾರನಾಗಿ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದು ನನಗೆ ಗೊತ್ತಿದೆ. ಅದೇ ರೀತಿ ಟೀಮ್ ಮ್ಯಾನೇಜ್ ಮೆಂಟ್ ಕೂಡ ನನಗೆ ಹಲವು ಬಾರಿ ಬೆಂಬಲ ನೀಡಿದೆ.
ಯಾವುದೇ ಪಂದ್ಯಾವಳಿಗೆ ನನ್ನ ಗಮನ ಮತ್ತು ಸಿದ್ಧತೆ ಒಂದೇ ಆಗಿರುತ್ತದೆ. ಇದೀಗ ನನ್ನ ಗಮನ ಮುಂದಿನ ವರ್ಷ ಏಕದಿನ ವಿಶ್ವಕಪ್ ಮೇಲೆ ಕೇಂದ್ರೀಕೃತವಾಗಿದೆ.
ಅದಕ್ಕಾಗಿ ಟೀಂ ಇಂಡಿಯಾ ಪರವಾಗಿ ಸಾಧ್ಯವಾದಷ್ಟು ಪಂದ್ಯಗಳನ್ನು ಆಡಲು ಬಯಸುತ್ತೇನೆ. ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ.
ಏಕದಿನ ವಿಶ್ವಕಪ್‌ಗೂ ಮುನ್ನ ಐಪಿಎಲ್ ಟೂರ್ನಿಯೂ ನಡೆಯಲಿದೆ. ಅದೇ ರೀತಿ ದೇಶಿಯ ಟೂರ್ನಿಯಲ್ಲೂ ಆಡಿ ಸಂಪೂರ್ಣ ಫಿಟ್ ಆಗಿರಲು ಬಯಸುತ್ತೇನೆ,’’ ಎಂದರು.
ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಧವನ್ ಭಾರತ ತಂಡದ ನಾಯಕತ್ವ ವಹಿಸಿದ್ದರು.
ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಮೂರು ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.