ಶಿವಮೊಗ್ಗ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ೭ ದಿನದ ಮಗುವನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಕರೆತರಲು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬರಲಾಗುತ್ತಿದ್ದು, ಮಗುವಿರುವ ಆಂಬ್ಯುಲೆನ್ಸ್ ಈಗಾಗಲೇ ಶಿವಮೊಗ್ಗದಿಂದ ಹೊರಟಿದೆ. ಹೊನ್ನಾಳಿ ತಾಲೂಕಿನ ಬೆಲೆಮಲ್ಲೂರು ಗ್ರಾಮದ ಸ್ವಾಮಿ ಮತ್ತು ಸುಧಾ ದಂಪತಿಯ ೭ ದಿನದ ಮಗುವಿಗೆ ಹೃದಯದಲ್ಲಿ ರಂಧ್ರವಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆತರಲಾಗುತ್ತಿದೆ.
೧೦ ದಿನದ ಹಿಂದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಸುಧಾ ಅವರು ಫೆಬ್ರವರಿ ೪ರಂದು ಮಗುವಿಗೆ ಜನ್ಮ ನೀಡಿದ್ದರು. ಸ್ಕ್ಯಾನಿಂಗ್ ಮಾಡಿದಾಗ ಮಗುವಿನ ಹೃದಯಲ್ಲಿ ರಂಧ್ರ ಇರುವುದು ಪತ್ತೆಯಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ವೈದ್ಯರು ಸಲಹೆ ನೀಡಿದ್ದರು. ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿ ಮಗು ಇರುವ ಆಂಬ್ಯುಲೆನ್ಸ್ ಶಿವಮೊಗ್ಗದಿಂದ ಬೆಂಗಳೂರಿಗೆ ತಲುಪುವ ತನಕ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗದಿಂದ ಈಗಾಗಲೇ ಆಂಬ್ಯುಲೆನ್ಸ್ ಹೊರಟಿದೆ. ಪೊಲೀಸ್ ಎಸ್ಕಾರ್ಟ್ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ.