ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲ (Ankola) ತಾಲೂಕಿನ ಶಿರೂರು (Shirur) ಗುಡ್ಡ ಕುಸಿತ (Landslide) ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರೂರು ಕ್ಯಾಂಟೀನ್ ಮಾಲೀಕರ 5 ವರ್ಷದ ಮಗಳ ಮೃತದೇಹ ಸಿಕ್ಕಿದೆ.
ಆವಂತಿಕ (5) ಸಾವನ್ನಪ್ಪಿದ ಬಾಲಕಿ. ಆವಂತಿಕ ಮೃತದೇಹ ಗಂಗಾವಳಿ ನದಿಯಲ್ಲಿ ತೇಲಿ ಹೋಗಿ ಗೋಕರ್ಣ ಬ್ರಿಡ್ಜ್ ಹತ್ತಿರ ಪತ್ತೆಯಾಗಿದೆ.
ಈ ಕುರಿತು ಅಂಕೋಲ ತಹಶೀಲ್ದಾರ್ ಮಾಹಿತಿ ನೀಡಿ, ಗುಡ್ಡ ಕುಸಿತದ ಪ್ರಕರಣದಲ್ಲಿ ಒಟ್ಟು ಆರು ಜನ ಸಾವನ್ನಪ್ಪಿರುವ ಮಾಹಿತಿ ಇದೆ. ಇಲ್ಲಿಯವರೆಗೆ ಐವರ ಮೃತದೇಹ ಪತ್ತೆಯಾಗಿದೆ. ಈಗ ಕ್ಯಾಂಟೀನ್ ಮಾಲೀಕರ ಮಗಳು ಆವಂತಿಕಾ ಮೃತದೇಹ ಪತ್ತೆಯಾಗಿದೆ. ಮತ್ತೊಂದು ಕಡೆ ರಸ್ತೆ ಮೇಲಿನ ಗುಡ್ಡ ತೆರವು ಕಾರ್ಯ ಸಹ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಗುಡ್ಡ ಕುಸಿದ ಪ್ರಕರಣದಲ್ಲಿ ಸುಮಾರು 20 ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ತಜ್ಞರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಜಿಯೋಗ್ರಾಫಿಕಲ್ ಸರ್ವೇ ಆಫ್ ಇಂಡಿಯಾ ತಜ್ಞ ಸಂಜೀವ್ ಎಂಬವರು ಭೂಕುಸಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿರುವುದರಿಂದಾಗಿ ತಜ್ಞರು ಸ್ಥಳದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.







