ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ (Ankola)ದ ಶಿರೂರಿನಲ್ಲಿ ಭಾರೀ ಮಳೆಯಿಂದಾಗಿ ಉಂಟಾಗಿದ್ದ ಭೂ ಕುಸಿತ (Shirur Landslide)ದಲ್ಲಿ ಕಾಣೆಯಾಗಿದ್ದ ಲಾರಿಯ ಅವಶೇಷ ಪತ್ತೆಯಾಗಿದೆ ಎನ್ನಲಾಗಿದೆ.
ಗಂಗಾವಳಿ ನದಿಯಲ್ಲಿ ಕಾಣೆಯಾದ ಮೂವರ ಶೋಧ ಕಾರ್ಯಕ್ಕೆ ಶಾಸಕ ಸತೀಶ್ ಸೈಲ್ ಸೂಚನೆಯಂತೆ ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆಯವರು ಗಂಗಾವಳಿ ನದಿಯಲ್ಲಿ ಸಂಜೆ ವೇಳೆಯಲ್ಲಿ ಶೋಧಕಾರ್ಯ ನಡೆಸಿದರು. ಈ ವೇಳೆ ಗ್ಯಾಸ್ ಟ್ಯಾಂಕರ್‌ನ ಚಿಕ್ಕ ಭಾಗವನ್ನು ಶೋಧ ನಡೆಸಿ ಹೊರ ತೆಗೆಯಲಾಗಿದೆ ಎನ್ನಲಾಗಿದೆ.
ಕೇರಳದ ಲಾರಿ ಚಾಲಕ ಅರ್ಜುನ್, ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಶವಕ್ಕಾಗಿ ಶೋಧ ನಡೆಸಬೇಕಿದೆ. ಹೀಗಾಗಿ ಗಂಗಾವಳಿ ನದಿಯಲ್ಲಿ ಜಿಲ್ಲಾಡಳಿತದ ತಡೆಯ ಮಧ್ಯೆಯೇ ಶೋಧ ಕಾರ್ಯ ಮುಂದುವರೆದಿದೆ. ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ಈಶ್ವರ್ ಮಲ್ಪೆ ಗಂಗಾವಳಿ ನದಿಗೆ ಇಳಿದಿದ್ದಾರೆ. ಸೇನಾ ತಂಡ ಈ ಹಿಂದೆ ಗುರುತಿಸಿದ ಜಾಗದಲ್ಲಿ ಮತ್ತೊಮ್ಮೆ ಮುಳುಗಿ ಈಶ್ವರ ಮಲ್ಪೆ ಶೋಧ ನಡೆಸಿದ್ದಾರೆ. ಶಾಸಕ ಸತೀಶ್ ಸೈಲ್, ಕೇರಳ ರಾಜ್ಯದ ಶಾಸಕ ಆಶ್ರಫ್ ಕೂಡ ಹಾಜರಿದ್ದರು.
ಈ ವೇಳೆ ಲಾರಿಯ ಜಾಕ್ ಪತ್ತೆಯಾಗಿದೆ. ಕೇರಳ ಮೂಲದ ಚಾಲಕ ಅರ್ಜುನ್ ಓಡಿಸುತ್ತಿದ್ದ ಲಾರಿಯ ಜಾಕ್ ಪತ್ತೆ ಮಾಡಲಾಗಿದೆ. ಲಾರಿಯ ಎರಡು ಬಿಡಿ ಭಾಗಗಳು ಕೂಡ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಒಂದು ಲಾರಿ ಬಾಗಿಲಿನ ಕೀಲು ಹಾಗೂ ಜಾಕ್ ಪತ್ತೆಯಾಗಿದೆ. ಬಾಗಿಲಿನ ಕೀಲು ತನ್ನ ವಾಹನದ್ದಲ್ಲ. ಆದರೆ ಜಾಕ್ ಮಾತ್ರ ತನ್ನ ವಾಹನದ್ದೇ ಎಂದು ನಾಪತ್ತೆಯಾದ ಬೆಂಜ್ ಲಾರಿಯ ಮಾಲಿಕ ಮುಫಿನ್ ತಿಳಿಸಿದ್ದಾರೆ.