ನಟ ರಮೇಶ್ ಅರವಿಂದ್ ನಟಿಸಿರುವ ಶಿವಾಜಿ ಸುರತ್ಕಲ್ 2 ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಅಭಿಮಾನಿಗಳು ಹಾಗೂ ಸಿನಿ ರಸಿಕರು ಟ್ರೈಲರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಕಾಶ್ ಶ್ರೀವತ್ಸ ನಿರ್ದೇಶಿಸಿರುವ ಈ ಚಿತ್ರವನ್ನು ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ.
ಶಿವಾಜಿ ಸುರತ್ಕಲ್ 2 ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆ. ನಾನು ಹಾಗೂ ರಮೇಶ್ ಸರ್ ವಾಟ್ಸಪ್ ಮೂಲಕ ಎರಡನೇ ಭಾಗದ ಕಥೆಯ ಕುರಿತು ಚರ್ಚೆ ನಡೆಸಿದೇವು. ಪ್ರತಿಯೊಬ್ಬ ವ್ಯಕ್ತಿಗೂ ಲಾಕ್ ಡೌನ್ ನಿಂದ ತೊಂದರೆ ಆದರೆ, ನಮಗೆ ಮಾತ್ರ ಈ ಚಿತ್ರದ ಕಥೆ ಬರೆಯಲು ಅನುಕೂಲವಾಯಿತು. ನಮ್ಮ ತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಅಂದುಕೊಂಡಂತೆ ಈಗ ಟ್ರೈಲರ್ ಬಿಡುಗಡೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಮನೆ ಮಾಡಿರುವ ‘ಮಾಯಾವಿ ಯಾರು?’ ಎಂಬ ಪ್ರಶ್ನೆಗೆ ಅಂದೆ ಉತ್ತರ ಸಿಗಲಿದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳಿದ್ದಾರೆ.
ಶಿವಾಜಿ ಸುರತ್ಕಲ್ 2 ಚಿತ್ರದ ಟ್ರೈಲರ್ ಉತ್ತಮವಾಗಿದೆ. ಏಪ್ರಿಲ್ ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ನಾನು ಪ್ರತಿ ವೀಕೆಂಡ್ ನಿಮ್ಮ ಮನೆಗೆ ಬರುತ್ತೇನೆ. ನೀವು ಕುಟುಂಬ ಸಮೇತ ನಮ್ಮ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬನ್ನಿ ಎಂದು ರಮೇಶ್ ಅರವಿಂದ್ ಮನವಿ ಮಾಡಿದ್ದಾರೆ.
ಅನೂಪ್ ಗೌಡ ನಿರ್ಮಾಪಕರಾಗಿದ್ದು, ರಾಧಿಕಾ ಚೇತನ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ವಿನಾಯಕ ಜೋಶಿ, ವಿದ್ಯಾಮೂರ್ತಿ ನಟಿಸಿದ್ದಾರೆ.








