ಪಂಚಭೂತಗಳಲ್ಲಿ ಲೀನರಾದ ಶಿವರಾಮ್ ಅವರ ಬಗ್ಗೆ ಸಿಎಂ ಬೊಮ್ಮಾಯಿ , ತಾರೆಯರ ಮಾತು
ನಿನ್ನೆ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಇಂದು ಬೆಳಿಗ್ಗೆ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಇಡಲಾಗಿತ್ತು. ಬಳಿಕ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು. 83 ವರ್ಷದ ಶಿವರಾಂ ಅವರು, ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕ, ನಿರ್ಮಾಪಕ, ನಟರಾಗಿ ಸುಮಾರು 6 ದಶಕಗಳ ಕಾಲ ನಿರಂತರ ಸೇವೆ ಸಲ್ಲಿಸಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಶರಪಂಜರ, ಶುಭಮಂಗಳ, ನಾಗರಹಾವು ಸೇರಿದಂತೆ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಸಿ ತಮ್ಮದೇ ಆದ ಛಾಪು ಮೂಡಿಸಿದ್ದ ಶಿವರಾಮ್ ಅವರ ಅಗಲಿಕೆಗೆ ಇಡೀ ಸ್ಯಾಂಡಲ್ ವುಡ್ ಕಂಬನಿ ಮೀಡಿದಿದೆ.. ಶಿವರಾಂ ಅವರ ನಿಧನಕ್ಕೆ ತಾರೆಯರು , ರಾಜಕೀಯ ಮುಖಂಡರು , ಗಣ್ಯರು ಸಂತಾಪ ಸೂಚಿಸಿದ್ದಾರೆ..
ಶಿವರಾಂ ಅವರ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಸಚಿವ ಬಿ.ಸಿ. ಪಾಟೀಲ್, ನಾವು ಅವರ ಚಿತ್ರಗಳನ್ನು ನೋಡಿ ಬೆಳೆದವರು. ಅವರೊಂದಿಗೆ ನಟಿಸುವ ಕನಸು ಕಂಡಿರಲಿಲ್ಲ. ಕೌರವ ಚಿತ್ರದಲ್ಲಿ ಅವರೊಂದಿಗೆ ನಟಿಸಿದ್ದು, ಮರೆಯಲಾರದ ಕ್ಷಣ ಎಂದು ಶಿವರಾಂ ಅವರನ್ನ ನೆನೆದರು..
ಇದೇ ವೇಳೆ ನಟ ರಾಘವೇಂದ್ರ ರಾಜ್ ಕುಮಾರ್ ಕೂಡ ಮಾತನಾಡಿ, ದುಃಖದ ಸಮಯದಲ್ಲಿ ಸಮಾಧಾನ ಹೇಳುತ್ತಿದ್ದರು. ನಮ್ಮ ಕುಟುಂಬದೊಂದಿಗೆ ಆತ್ಮೀಯರಾಗಿದ್ದರು. ಶಬರಿಮಲೈಗೆ ಅವರೊಂದಿಗೆ ಯಾತ್ರೆ ಮಾಡಿದ್ದ ನೆನಪುಗಳು ಹಸಿರಾಗಿದೆ ಎಂದು ಸಂತಾಪ ಸೂಚಿಸಿದ್ರು. ನಟ ಸುಂದರ್ ರಾಜ್ ಅವರು ಸಹ ಅಂತಿಮ ದರ್ಶನನದ ಬಳಿಕ ಮಾತನಾಡಿ ಶಿವರಾಂ ಅವರು ಕಲಾವಿದರಷ್ಟೇ ಅಲ್ಲ, ಚಿತ್ರರಂಗ ಕಟ್ಟುವಲ್ಲಿ ಆಧಾರ ಸ್ತಂಭವಾಗಿ ನಿಂತಿದ್ದರು ಎಂದು ಸಂತಾಪ ವ್ಯಕ್ತಪಡಿಸಿದ್ರು.
ನಟಿ ಪ್ರೇಮಾ ಅವರು ಕೂಡ ಶಿವರಾಂ ಅಗಲಿಕೆಗೆ ಸಂತಾಪ ಸೂಚಿಸುತ್ತಾ , ಅವರ ಅರ್ಪಣಾ ಮನೋಭಾವ ನಮಗೆ ಮಾದರಿಯಾಗಿತ್ತು. ತಂದೆ ಸಮಾನರಾದ ಅವರನ್ನು ಕಳೆದುಕೊಂಡಿರುವುದು ದುಃಖ ತಂದಿದೆ ಎಂದು ತಿಳಿಸಿದರು. ನಟ ರಮೇಶ್ ಅರವಿಂದ್ ಅವರು ಕೂಡ ಶಿವರಾಮ್ ಅವರನ್ನ ನೆನೆದು , ಶಿವರಾಂ ಅವರಿಗೆ ಸಾಹಿತ್ಯಲ್ಲೂ ಹೆಚ್ಚಿನ ಒಲವಿತ್ತು. ಹೆಚ್ಚಿನ ಜ್ಞಾನವನ್ನು ಹೊಂದಿದ್ದ ಅವರು ಉತ್ತಮ ಜೀವನ ಶೈಲಿ ರೂಡಿಸಿಕೊಂಡು, ಎಲ್ಲರಿಗೂ ಮಾದರಿಯಾಗಿದ್ದರು ಎಂದರು. ಇನ್ನೂ ಅನೇಕರು ಟ್ವೀಟ್ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ..