19 ವರ್ಷಗಳ ಕಾಲ ರಿಮೇಕ್ ಮಾಡದ ಸೆಂಚುರಿ ಸ್ಟಾರ್ ಶಿವಣ್ಣ ಕಳೆದೊಂದು ವರ್ಷದಿಂದ ರಿಮೇಕ್ ನತ್ತ ಮುಖ ಮಾಡಿದ್ದಾರೆ. ಕಳೆದ ವರ್ಷ ಮಲಯಾಳಂನ “ಒಪ್ಪಂ” ಸಿನಿಮಾದ ರಿಮೇಕ್ “ಕವಚ” ಚಿತ್ರದಲ್ಲಿ ನಟಿಸಿದ್ದ ಶಿವರಾಜ್ಕುಮಾರ್ ಇದೀಗ ಕನ್ನಡದ “ಅಸುರನ್” ಆಗಲು ಹೊರಟಿದ್ದಾರೆ.

ಹೌದು..! ಅಸುರನ್, ತಮಿಳಿನ ಬ್ಲಾಕ್ ಬಸ್ಟರ್ ಸಿನಿಮಾ. ಈ ಸಿನಿಮಾ ಕನ್ನಡದಲ್ಲಿ ರಿಮೇಕ್ ಆಗ್ತಿದ್ದು ಶಿವರಾಜ್ ಕುಮಾರ್ ನಾಯಕರಾಗಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ಆ ನಿಟ್ಟಿನಲ್ಲಿ ತಮಿಳು ನಿರ್ಮಾಪಕರೇ ಒಂದು ಹೆಜ್ಜೆ ಮುಂದಿಟ್ಟು ಶಿವಣ್ಣ ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರಂತೆ.
ಅಂದಹಾಗೆ ತಮಿಳಿನ ವೆಕ್ಕೈ ಎಂಬ ಕಾದಂಬರಿ ಆಧರಿಸಿ ರೂಪಿಸಿದ್ದ ಸಿನಿಮಾ ಅಸುರನ್. ಚಿತ್ರದಲ್ಲಿ ಧನುಷ್ ನಾಯಕನಟನಾಗಿದ್ದು, 1980ರ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದಲ್ಲಿನ ದಲಿತರ ಶೋಷಣೆ, ಅದರ ವಿರುದ್ಧ ಹೋರಾಡುವ ನಾಯಕನ ಸಂಕಟ, ಹೋರಾಟ ಎಲ್ಲವೂ ಬಿಂಬಿತವಾಗಿತ್ತು. ಅಸುರನ್ ಈಗಾಗಲೇ ತೆಲುಗಿಗೆ ‘ನಾರಪ್ಪ’ ಶೀರ್ಷಿಕೆಯಲ್ಲಿ ರೀಮೇಕ್ ಆಗುತ್ತಿದ್ದು, ವಿಕ್ಟರಿ ವೆಂಕಟೇಶ್ ನಾಯಕರಾಗಿ ನಟಿಸುತ್ತಿದ್ದಾರೆ.









