ಬೆಂಗಳೂರು, ಜೂನ್ 8: ಚಿರಂಜೀವಿ ಸರ್ಜಾ ನಿಧನದ ಸುದ್ದಿ ಟ್ವೀಟ್ ಮಾಡಲು ಹೋಗಿ ಲೇಖಕಿ, ಅಂಕಣಗಾರ್ತಿ ಶೋಭಾ ಡೇ ಎಡವಟ್ಟು ಮಾಡಿಕೊಂಡಿದ್ದಾರೆ.
ಶೋಭಾ ಡೇ ಅವರು ನಿನ್ನೆ ನಿಧನರಾದ ಸ್ಯಾಂಡಲ್ ವುಡ್ ನಾಯಕ ನಟ ಚಿರಂಜೀವಿ ಸರ್ಜಾ ಅವರ ನಿಧನ ಸುದ್ದಿಯನ್ನು ಟ್ವೀಟ್ ಮಾಡುವಾಗ ತಪ್ಪನ್ನು ಎಸಗಿ ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಶೋಭಾ ಡೇ, ‘ಮತ್ತೊಬ್ಬ ಶೈನಿಂಗ್ ಸ್ಟಾರ್ ನಮ್ಮನ್ನು ಅಗಲಿದ್ದಾರೆ. ಎಂತಹ ದುರಂತ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ’ ಎಂದು ಬರೆದು ಚಿರುಸರ್ಜಾ ಟ್ಯಾಗ್ ಮಾಡಿದ್ದಾರೆ.

ಟ್ವೀಟ್ ನೋಡಿದ ನೆಟ್ಟಿಗರು ಕೂಡಲೇ ಶೋಭಾ ಡೇ ಅವರಿಗೆ ಮೆಗಾಸ್ಟಾರ್ ಚಿರಂಜೀವಿ ನಿಧನರಾಗಿಲ್ಲ. ಕನ್ನಡ ನಟ ಚಿರಂಜೀವಿ ಸರ್ಜಾ ನಿಧನರಾಗಿರುವುದು ಎಂದು ತಿಳಿಸಿದ್ದು, ನಂತರ ಶೋಭಾ ಡೇ ತಾವು ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಶೋಭಾ ಡೇ ಅವರನ್ನು ಟ್ವಿಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿರುವ ನೆಟ್ಟಿಗರು ಬಾಲಿವುಡ್ ಸ್ಟಾರ್ ಗಳ ಬಗ್ಗೆ ಬಹಳಷ್ಟು ತಿಳಿದಿರುವ ನಿಮಗೆ ದಕ್ಷಿಣ ಭಾರತ ಸ್ಟಾರ್ ಗಳ ಪರಿಚಯ ಎಷ್ಟಿದೆ ಎನ್ನುವುದು ನಿಮ್ಮ ಟ್ವೀಟ್ ನಿಂದಲೇ ಗೊತ್ತಾಗುತ್ತಿದೆ ಎಂದು ಗರಂ ಆಗಿದ್ದಾರೆ.








