ಕುವೈತ್: ಶಾರ್ಟ್ ಸರ್ಕ್ಯೂಟ್ (Short Circuit)ಗೆ ಒಂದೇ ಕುಟುಂಬದ ನಾಲ್ವರು ಬಲಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಕುವೈತ್ ನ (Kuwait) ಫ್ಲ್ಯಾಟ್ ವೊಂದರಲ್ಲಿ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಏರ್ ಕಂಡೀಷನರ್ (Air Conditioner)ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ (Kerala) ಮೂಲದ ದಂಪತಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಕೇರಳದ ಅಲಪ್ಪುಳದ ನೀರತ್ತುಪುರಂನ ಮ್ಯಾಥ್ಯೂಸ್ ಮುಲಾಕಲ್, ಪತ್ನಿ ಲಿನಿ ಅಬ್ರಹಾಂ ಮತ್ತು ಇಬ್ಬರು ಮಕ್ಕಳು ಮನೆಯಲ್ಲಿಯೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಕುಟುಂಬ ರಜೆಗೆಂದು ಕೇರಳಕ್ಕೆ ಬಂದಿತ್ತು. ಆದರೆ, ಇತ್ತೀಚೆಗಷ್ಟೇ ಅಂದರೆ ಶುಕ್ರವಾರವಷ್ಟೇ ಮರಳಿ ಕುವೈತ್ ಗೆ ಹೋಗಿತ್ತು. ಅದೇ ದಿನ ರಾತ್ರಿ ವೇಳೆ ಈ ದುರ್ಘಟನೆ ಸಂಭವಿಸಿದೆ. ಮ್ಯಾಥ್ಯೂಸ್ ಮುಲಾಕಲ್ ಸುದ್ದಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಲಿನಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿದ್ದರು ಎನ್ನಲಾಗಿದೆ.
ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಘಟನೆಯಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ಸಂತಾಪ ಸೂಚಿಸಿದೆ. ರಾಯಭಾರ ಕಚೇರಿ ಕೇರಳದಲ್ಲಿರುವ ಮೃತರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮೃತದೇಹಗಳನ್ನು ಕೇರಳಕ್ಕೆ ತಲುಪಿಸುವ ತಯಾರಿ ನಡೆಸುತ್ತಿದೆ ಎನ್ನಲಾಗಿದೆ.