ಬೆಂಗಳೂರು: ಭ್ರಷ್ಟಾಚಾರದ (Corruption) ಆರೋಪದ ಕಳಂಕ ಇಲ್ಲದ ಒಬ್ಬನೇ ಒಬ್ಬ ನಾಯಕನನ್ನು ಬಿಜೆಪಿಯಲ್ಲಿ (BJP) ತೋರಿಸಿದರೆ ಗೌರವದಿಂದ ಕರೆಸಿ ಸಾರ್ವಜನಿಕವಾಗಿ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ನೇರ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ. ಕರ್ನಾಟಕ (Karnataka) ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಎರಡುವರೆ ಸಾವಿರ ಕೋಟಿ ರೂಪಾಯಿಗಳಿಗೆ ಹರಾಜು ಹಾಕಿ ಹಣ ಪೀಕಿದ್ದಾರೆ ಎಂಬ ಆರೋಪವನ್ನು ಸ್ವಪಕ್ಷದ ನಾಯಕರಿಂದಲೇ ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (Narendra Modi)ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಗುಡುಗಿದ್ದಾರೆ.
ಭ್ರಷ್ಟಾಚಾರದ ಆರೋಪ ಹೊರಿಸಿ ಭಾಷಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರೇ, ಭ್ರಷ್ಟಾಚಾರದ ಆರೋಪದ ಕಳಂಕ ಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕದ ಬಿಜೆಪಿಯಲ್ಲಿ ನೀವು ತೋರಿಸಿದರೆ ನಿಮ್ಮನ್ನು ಕರ್ನಾಟಕಕ್ಕೆ ಗೌರವದಿಂದ ಕರೆಯಿಸಿ ಸನ್ಮಾನ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಗಣಿಗಾರಿಕೆಗೆ ಕಾನೂನುಬಾಹಿರವಾಗಿ ಭೂಮಿ ಮಂಜೂರು ಮಾಡಿರುವ, ನೂರಾರು ಕೋಟಿ ರೂಪಾಯಿ ಹಗರಣದ ಆರೋಪ ಎದುರಿಸುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿರುವ ನಿಮಗೆ ಇತರರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವಾಗ ಆತ್ಮಸಾಕ್ಷಿಯೂ ಚುಚ್ಚುವುದಿಲ್ಲವೇ? ಎಂದಿದ್ದಾರೆ.
ಹಿಮಂತಾ ಶರ್ಮಾ, ಸುವೇಂದು ಅಧಿಕಾರಿ, ಹೆಚ್.ಡಿ.ಕುಮಾರಸ್ವಾಮಿ, ಅಜಿತ್ ಪವಾರ್, ಅಶೋಕ್ ಚವ್ಹಾಣ್, ನಾರಾಯಣ ರಾಣೆ, ಪ್ರತಾಪ್ ಸರ್‌ನಾಯಕ್ ಅವರಿಂದ ಹಿಡಿದು ಇತ್ತೀಚಿನ ಏಡ್ಸ್ ಟ್ರ್ಯಾಪ್ ಗಿರಾಕಿ ಮುನಿರತ್ನ ವರೆಗೆ ಭ್ರಷ್ಟಾಚಾರಿಗಳೇ ಇದ್ದಾರೆ ಎಂದು ಗುಡುಗಿದ್ದಾರೆ.








