ಶೇಕಡಾ ನೂರರಷ್ಟು ಉಚಿತ ಪಡಿತರ ನೀಡುವ ರಾಜ್ಯವಿದ್ದರೆ ತೋರಿಸಿ – ಮಮತಾ ಬ್ಯಾನರ್ಜಿ ಕೇಂದ್ರಕ್ಕೆ ಸವಾಲು
1 min read
ಶೇಕಡಾ ನೂರರಷ್ಟು ಉಚಿತ ಪಡಿತರ ನೀಡುವ ರಾಜ್ಯವಿದ್ದರೆ ತೋರಿಸಿ – ಮಮತಾ ಬ್ಯಾನರ್ಜಿ ಕೇಂದ್ರಕ್ಕೆ ಸವಾಲು
ಕೊಲ್ಕತ್ತಾ, ಜುಲೈ 9: ಪಶ್ಚಿಮ ಬಂಗಾಳ ಸರ್ಕಾರ ಜನರ ಬಗ್ಗೆ ಕಾಳಜಿ ಹೊಂದಿರುವ ಹಿನ್ನಲೆಯಲ್ಲಿ ಇಲ್ಲಿರುವ ವಲಸೆ ಕಾರ್ಮಿಕರು ರಾಜ್ಯ ಬಿಟ್ಟು ಹೋಗಲು ತಯಾರಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಶೇಕಡಾ ನೂರಕ್ಕೆ ನೂರರಷ್ಟು ಉಚಿತ ಪಡಿತರ ನೀಡುವ ಯಾವುದಾದರೂ ಒಂದು ರಾಜ್ಯವಿದ್ದರೆ ತೋರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಎಸೆದಿರುವ ಮಮತಾ ಬ್ಯಾನರ್ಜಿ, ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಕೇಂದ್ರ ಶೇಕಡಾ 40ರಷ್ಟು ಸಹಾಯ ಮಾಡಿ ಪ್ರಶಂಸೆಯನ್ನು ಮಾತ್ರ ಸಂಪೂರ್ಣವಾಗಿ ಪಡೆಯುತ್ತಿದೆ ಎಂದು ವ್ಯಂಗ್ಯ ಮಾಡಿದರು. ಪಶ್ಚಿಮ ಬಂಗಾಳ ಸರ್ಕಾರದ ಸ್ವಾಸ್ಥಾ ಸತ್ಯ ಯೋಜನೆ ಜನರಿಗೆ ಶೇಕಡಾ 100 ರಷ್ಟು ನೆರವು ನೀಡುತ್ತಿದೆ ಎಂದು ಕೇಂದ್ರದ ಯೋಜನೆಯನ್ನು ಟೀಕಿಸಿದರು.
ಅಷ್ಟೇ ಅಲ್ಲ ದಕ್ಷಿಣ ಕೊಲ್ಕತ್ತಾದ ಬಿಜೆಪಿ ಅಧ್ಯಕ್ಷ ಹಾಗೂ ಆತನ ತಾಯಿಗೆ ಕೊರೊನಾ ಸೋಂಕು ತಗುಲಿದಾಗ ಆತನ ಸಹಾಯಕ್ಕೆ ಬಿಜೆಪಿ ಬರಲಿಲ್ಲ. ನಾನು ಅವರ ಜವಾಬ್ದಾರಿ ತೆಗೆದುಕೊಂಡು ಆಸ್ಪತ್ರೆಗೆ ಸೇರಿಸಿದ್ದೇನೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಪಶ್ಚಿಮ ಬಂಗಾಳದಲ್ಲಿ ಇಲ್ಲಿಯವರೆಗೆ 23,837 ಜನರಿಗೆ ಕೊರೊನಾ ವೈರಸ್ ತಗುಲಿದ್ದು, 15,790 ಜನರು ಗುಣಮುಖರಾಗಿದ್ದಾರೆ. 7,243 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 804 ಜನರು ಪ್ರಾಣ ಕಳೆದುಕೊಂಡಿದ್ದಾರೆ