ಡಿ. ದೇವರಾಜು ಅರಸು ಅವರ ಬಳಿಕ ರಾಜ್ಯದ ಅತ್ಯಧಿಕ ಅವಧಿಯ ಮುಖ್ಯಮಂತ್ರಿಯಾಗಿರುವ ಕೀರ್ತಿಗೆ ಇಂದು ಸಿಎಂ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ. ಈ ಐತಿಹಾಸಿಕ ಕ್ಷಣದ ನಡುವೆಯೇ ಅವರು ತಮ್ಮ ಭವಿಷ್ಯದ ನಾಯಕತ್ವದ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಪೂರ್ಣಾವಧಿ ಮುಖ್ಯಮಂತ್ರಿ ಆಗುವ ವಿಶ್ವಾಸ ಹೊಂದಿದ್ದೇನೆ. ಮತ್ತೊಮ್ಮೆ ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ಸ್ಪಷ್ಟವಾಗಿ ಘೋಷಿಸಿದ್ದಾರೆ. ತಮ್ಮ ಬಗ್ಗೆ ನಡೆಯುತ್ತಿರುವ ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ, ಹೈಕಮಾಂಡ್ ಮೇಲಿನ ನಂಬಿಕೆಯನ್ನು ಅವರು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.
ನನಗೆ ಹೈಕಮಾಂಡ್ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಯಾವ ನಿರ್ಧಾರವಾದರೂ ಹೈಕಮಾಂಡ್ ಕೈಗೊಳ್ಳುತ್ತದೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳುವ ಮೂಲಕ, ಪಕ್ಷದ ಶಿಸ್ತಿನ ಜೊತೆಗೆ ತಮ್ಮ ಆತ್ಮವಿಶ್ವಾಸವನ್ನೂ ಸಿಎಂ ಪ್ರದರ್ಶಿಸಿದ್ದಾರೆ.
ರಾಜಕೀಯ ವಲಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕುರಿತ ಗೊಂದಲಗಳು, ಊಹಾಪೋಹಗಳು ನಡೆಯುತ್ತಿರುವಾಗಲೇ ಸಿದ್ದರಾಮಯ್ಯ ಅವರ ಈ ಹೇಳಿಕೆ ಸದ್ದು ಮಾಡುವ ರಾಜಕೀಯ ಸಂದೇಶವಾಗಿ ಪರಿಗಣಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಒಳರಾಜಕೀಯ ಹಾಗೂ ಆಡಳಿತದ ದಿಕ್ಕು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ.








