ಜಾತಿ ವ್ಯವಸ್ಥೆ ಹೋಗುವವರೆಗೆ, ಇದು ಪ್ರಜಾಪ್ರಭುತ್ವ ವ್ಯವಸ್ಥೇ ಎನಿಸಿಕೊಳ್ಳುವುದಿಲ್ಲ : ಸಿದ್ದರಾಮಯ್ಯ
ಶಿವಮೊಗ್ಗ : ಕಲ್ಲಿನ ಕೆಲಸ ಮಾಡುವುದರಿಂದ ಭೂವಿ ಸಮಾಜವನ್ನು ಸ್ಥಳೀಯ ಭಷೆಯಲ್ಲಿ ವಡ್ಡರು ಎಂದು ಕರೆಯುತ್ತಾರೆ. ನಮ್ಮದು ವೃತ್ತಿ ಆಧಾರಿತ ಜಾತಿ ವ್ಯವಸ್ಥೆ. ಇದು ನಿರ್ಮೂಲನೆಯಾಗಬೇಕು ಎಂದು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
ಭೋವಿ (ವಡ್ಡರ) ಸಮಾಜವು ನಗದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶ ಹಾಗೂ ಭೋವಿ ಭವನ ಉದ್ಘಾಟಿಸಿ ಮಾತನಾಡಿದ ಅವರು ಜಾತಿ ವ್ಯವಸ್ಥೆ ನಿರ್ಮೂಲನೆ ಆಗುವರೆಗೂ ಇದು ಪ್ರಜಾಪ್ರಭುತ್ವ ವ್ಯವಸ್ಥೇ ಎನಿಸಿಕೊಳ್ಳುವುದಿಲ್ಲ. ಇನ್ನೂ ಕಲ್ಲು ಒಡೆಯುವವರು, ಒಡೆದ ಕಲ್ಲು ಬಳಸಿ ದೇವಾಸ್ಥಾನ ಕಟ್ಟುವವರು ನೀವು. ಆದರೆ ದೇವಸ್ಥಾನದ ಒಳಗಡೆ ಹೋಗುವವರು ಬೇರೆ. ಈ ಜಾತಿ ವ್ಯವಸ್ಥೆ ಸಾವಿರಾರು ವರ್ಷಗಳಿಂದ ಇದೆ ಎಂದರು.
ಇಂತಹ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಅನೇಕ ಜನ ಶರಣರು, ಸೂಫಿ ಸಂತರು ಸಮಾಜ ಸುಧಾರಣೆ ಮಾಡಿದ್ದಾರೆ. ಶ್ರೇಣೀಕೃತ ಜಾತಿ ವ್ಯವಸ್ಥೆ ಇರುವವರೆಗೆ ಸಮಾನತೆಯ ಸಾಧನೆ ಎಂಬುದು ಮರೀಚಿಕೆ ಎಂದು ಅಸಮಾಧಾನ ಹೊರಹಾಕಿದರು.
ಅಲ್ಲದೇ ಚಾತುರ್ವರ್ಣ ವ್ಯವಸ್ಥೆಯಲ್ಲಿ ಶೂದ್ರ ಮತ್ತು ಅತಿ ಶೂದ್ರ ವರ್ಗದ ಜನರು ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತಗೊಂಡಿದ್ದರು. ಇದರ ಪರಿಣಾಮವಾಗಿ ಇಂದು ಸಮಾಜದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆ ಕಾಣಬಹುದಾಗಿದೆ. ಶಿಕ್ಷಣ ವಂಚಿತ ಜಾತಿಗಳು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದು ಕಷ್ಟದ ಕೆಲಸ ಎಂದರು.
ಇದೇ ಕಾರಣಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಅದೇ ಕಾರಣಕ್ಕೆ ಭೋವಿ ಸಮಾಜದ ಯುವಕರು ನೂರಕ್ಕೆ ನೂರರಷ್ಟು ವಿದ್ಯಾವಂತರಾಗಬೇಕಿದೆ. ವಿದ್ಯಾವಂತರಾಗದ ಹೊರತು ಭೋವಿ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿ ಕಾಣಲು ಸಾಧ್ಯವಿಲ್ಲ ಎಂದರು.