ಸಿದ್ದರಾಮಯ್ಯಗೆ ಅವಕಾಶ ಕೊಟ್ಟಾಗಿದೆ, ಡಿಕೆಶಿ ಸಿಎಂ ಆಗಲಿ : ಹೆಚ್.ವಿಶ್ವನಾಥ್
ಬೆಂಗಳೂರು : ಸಿದ್ದರಾಮಯ್ಯ ಬೇರೆ ಪಕ್ಷದಿಂದ ಬಂದವರು, ಅವರಿಗೆ ಸಿಎಂ ಅವಕಾಶ ಕೊಟ್ಟಾಗಿದೆ. ಡಿ ಕೆ ಶಿವಕುಮಾರ್ ಅದೇ ಪಕ್ಷದಲ್ಲಿ ಇದ್ದವರು, ಅವರಿಗೆ ಅವಕಾಶ ಸಿಗಬೇಕು ಎಂದು ಎಂಎಲ್ ಸಿ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಕಾಂಗ್ರೆಸ್ ಶಾಸಕರ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಎಚ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯನವರೇ ಜಮೀರ್ ನ ಮುಂದಿಟ್ಟುಕೊಂಡು ಹೋಗಬೇಡಿ, ಒಳ್ಳೆದಾಗಲ್ಲ. ಶಿಷ್ಯಂದಿರು ಎಲ್ಲವನ್ನೂ ಮಾತನಾಡುತ್ತಾರೆ. ಶಿಷ್ಯಂದಿರು 150 ಸೀಟು ಬರುತ್ತದೆ ಎಂದು ಹೇಳುತ್ತಾರೆ. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಯಾಕೆ 70ಕ್ಕೆ ಬಂದು ನಿಂತಿರಿ ಎಂದು ಸಿದ್ದರಾಮಯ್ಯ ಕಾಲೆಳೆದರು.
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಹಳ್ಳಿಹಕ್ಕಿ, ಸಿದ್ದರಾಮಯ್ಯಗೆ ಕ್ಷೇತ್ರವೇ ಇಲ್ಲ. ಒಬ್ಬ ಮಾಜಿ ಮುಖ್ಯಮಂತ್ರಿಯಾದವರು ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಇಂಥ ಪರಿಸ್ಥಿತಿ ಬರಬಾರದು. ಅವರೇ ಸಿಎಂ ಎನ್ನಲು ಇದು ‘ಟೂ ಅರ್ಲಿ’ ಎಂದು ಲೇವಡಿ ಮಾಡಿದರು.
ಇನ್ನು ಮುಖ್ಯಮಂತ್ರಿ ಸ್ಥಾನ ಪತ್ರಾವಳಿ ಅಲ್ಲ, ಸಿಎಂ ಸ್ಥಾನ ಉಂಡು ಬಿಸಾಡುವುದಲ್ಲ. ಅದನ್ನು ಸ್ವಚ್ಚವಾಗಿಟ್ಟು ಮುಂದೆ ಬರುವವರಿಗೆ ಅವಕಾಶ ಕೊಡಬೇಕು. ಸಿದ್ದರಾಮಯ್ಯ ಬೇರೆ ಪಕ್ಷದಿಂದ ಬಂದವರು, ಅವರಿಗೆ ಸಿಎಂ ಅವಕಾಶ ಕೊಟ್ಟಾಗಿದೆ. ಡಿ ಕೆ ಶಿವಕುಮಾರ್ ಅದೇ ಪಕ್ಷದಲ್ಲಿ ಇದ್ದವರು, ಅವರಿಗೆ ಅವಕಾಶ ಸಿಗಬೇಕು. ಸಿದ್ದರಾಮಯ್ಯ ಈಗಾಗಲೇ ಒಂದು ಬಾರಿ ಸಿಎಂ ಆಗಿದ್ದಾರೆ. ಈಗ ಮಲ್ಲಿಕಾರ್ಜುನ ಖರ್ಗೆ ಇದಾರೆ, ಪರಮೇಶ್ವರ್ ಇದಾರೆ ಎಂದರು.