ಮುಂಬರುವ ಡಿಸೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಗಳಲ್ಲಿ ಬದಲಾವಣೆಯಾಗಬಹುದು ಎಂಬ ರಾಜಕೀಯ ವದಂತಿಗಳು ಭಾರಿ ವೇಗದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಂದು ಒಗ್ಗಟ್ಟಿನ ಸಂದೇಶ ನೀಡಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರವು ಬಂಡೆಯಂತಿದೆ. ಪೂರ್ತಿಯಾಗಿ ಐದು ವರ್ಷ ಸುಭದ್ರವಾಗಿ ಮುಂದುವರಿಯುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅವರು ಜೊತೆಗೆ ನಿಂತಿದ್ದ ಡಿಸಿಎಂ ಡಿಕೆಶಿಯ ಕೈ ಹಿಡಿದು ನಗುತ್ತಾ, ನಾನು ಮತ್ತು ಡಿಸಿಎಂ ಡಿಕೆಶಿ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ನಾವು ಚೆನ್ನಾಗಿಯೇ ಇದ್ದೇವೆ ಎಂದು ಸ್ಪಷ್ಟಪಡಿಸಿದರು. ಅವರ ಮಾತುಗಳಿಗೆ ಪ್ರತಿಯಾಗಿ ಡಿಕೆಶಿಯೂ ಕೂಡ ನಗು ಪ್ರದರ್ಶಿಸಿ ಸಿಎಂ ಹೇಳಿಕೆಗೆ ಬೆಂಬಲ ನೀಡಿದರು.
ಇತ್ತೀಚೆಗೆ ವಿವಿಧ ರಾಜಕೀಯ ವಲಯಗಳಿಂದ ಡಿಸೆಂಬರ್ ತಿಂಗಳಲ್ಲಿ ಸರ್ಕಾರದ ನಾಯತ್ವ ಬದಲಾಗಬಹುದು, ಸಿದ್ದರಾಮಯ್ಯ ಸ್ಥಾನದಿಂದ ಕೆಳಗಿಳಿದು ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ಸಿಗಬಹುದು ಎಂಬ ಮಾತುಗಳು ಕೇಳಿಬಂದಿವೆ. ಆದರೆ ಇಂದು ಇಬ್ಬರು ನಾಯಕರೂ ಒಟ್ಟಿಗೆ ನಿಂತು, ತಮ್ಮ ಬಾಂಧವ್ಯವನ್ನು ಎಲ್ಲರ ಮುಂದೂ ಪ್ರದರ್ಶಿಸಿದ್ದು, ಸರ್ಕಾರದ ಒಳಗಿನ ಸ್ಥಿರತೆಗೆ ಬಲ ನೀಡಿದಂತಾಗಿದೆ.








